Monday, June 15, 2020

ಬಸ್ಸಿನಲ್ಲಿ ಸಿಕ್ಕನೊಬ್ಬ ಬುದ್ಧಿವಂತ

ನಿಮ್ಮ ಪ್ರಕಾರ ಬುದ್ದಿವಂತ ಎಂದರೆ ಯಾರು ಎಂದು ಪ್ರಶ್ನೆ ಮಾಡಿದರೆ, ವಿಧ ವಿಧ ಉತ್ತರಗಳು ದೊರೆತವು. 

ತರಗತಿಯಲ್ಲಿ ಮೊದಲ ಅಂಕ ಗಳಿಸಿದವ ಎಂದು ಒಬ್ಬ ಹೇಳಿದರೆ, ಪರೀಕ್ಷೆಯ ಹಿಂದಿನ ರಾತ್ರಿ ಓದಿ, ಅರವತ್ತು ಪರ್ಸೆಂಟ್ ನಲ್ಲಿ ಪಾಸ್ ಆಗುವವ ಬುದ್ಧಿವಂತ ಎಂದು ಮತ್ತೊಬ್ಬ ಹೇಳಿದ. ಅಂಗಡಿಯವ ಹೇಳಿದ ಬೆಲೆಗೆ ಒಪ್ಪದೇ ಚೌಕಾಶಿ ಮಾಡಿ ಕಡಿಮೆಗೆ ತರುವುದು ಬುದ್ಧಿವಂತಿಕೆ ಎಂದೊಬ್ಬಳು ಹೇಳಿದರೆ, ಅಷ್ಟು ವಾದಮಾಡಿದರು ನಮ್ಮ ಲಾಭಕ್ಕೆ ಕೊರತೆಯಾಗದಂತೆ ಮಾರುವುದು ಬುದ್ಧಿವಂತಿಕೆ ಎಂದ ಅಂಗಡಿಯವ. ರಾತ್ರೋ -ರಾತ್ರಿ ಸರಕಾರ ಕಟ್ಟಿ ನಿಲ್ಲಿಸುವವವ ಬುದ್ಧಿವಂತ ಎಂದನೊಬ್ಬ ವಿಚಾರವಂತ, ಒಂದು ದಿನದೊಳಗೆ ಸರ್ಕಾರವನ್ನು ಕೆಡವುವವ ಬುದ್ಧಿವಂತ ಎಂದನೊಬ್ಬ (ಸೊ ಕಾಲ್ಡ್ )ಪ್ರಜ್ಞಾವಂತ....!!

ಇಲ್ಲಿ ಎಲ್ಲರೂ ಬುದ್ಧಿವಂತರೇ....

ಒಂದು ಹಾಡು ನೆನಪಾಗುತ್ತಿದೆ ಆದರೆ ಒಂದು ಸಾಲನ್ನು ಮಾತ್ರ ಸ್ವಲ್ಪ ಬದಲಾಯಿಸಿದ್ದೇನೆ.  
ದೊಡ್ಡವರೆಲ್ಲ ಜಾಣರಲ್ಲ..  
ಚಿಕ್ಕವರೆಲ್ಲ ಕೋಣರಲ್ಲ...  
ಕುಡುಕರಿಗಿಂತ ಬುದ್ಧಿವಂತರು ಎಲ್ಲೂ ಸಿಗೋದಿಲ್ಲ..
ಗೆಳೆಯ ಎಲ್ಲೂ ಸಿಗೋದಿಲ್ಲ.. !!!

ಯಾಕೆ ಎಂದಿರಾ??- ಕಣ್ಣಾರೆ ಕಂಡಿದ್ದೇನೆ. 

   ಒಮ್ಮೆ ನಾನು, ನನ್ನ ಗೆಳತಿ ಹುಬ್ಬಳ್ಳಿಯಿಂದ ಶಿರಸಿಗೆ ಪ್ರಯಾಣಿಸುತ್ತಿದ್ದೆವು -ಕೆಂಪು ಬಸ್ಸಿನಲ್ಲಿ(ನಮ್ಮ ಕೆ. ಎಸ್ ಆರ್. ಟಿ. ಸಿ. ಯನ್ನು ಪ್ರೀತಿಯಿಂದ ಕರೆಯುವ ರೀತಿ...). ಕತ್ತಲಾಗಿತ್ತು ; ಸಣ್ಣದಾಗಿ ಮಳೆ ಬರುತ್ತಿತ್ತು. ಬಸ್ಸಿನಲ್ಲಿ ಬಹಳ ಜನರು ಇರದೇ ಇದ್ದರೂ, ಇನ್ನೊಬ್ಬ ಹತ್ತಿದರೂ ಅವನಿಗೆ ಕುಳಿತುಕೊಳ್ಳಲು ಜಾಗವಿರಲಿಲ್ಲ. 

 ಸರಿಯಾಗಿ ನೆನಪಿಲ್ಲ. ಹುಬ್ಬಳ್ಳಿ ಪೇಟೆಯನ್ನು ದಾಟಿ ಮುಂದೆ ಬಂದಿದ್ದೇವೆ. ಆಗ ಒಬ್ಬ ಬಸ್ ಹತ್ತಿದ. ಪಾಪ.. ಸರಿಯಾಗಿ ನಿಲ್ಲಲೂ ಆಗುತ್ತಿಲ್ಲ ಅವನಿಂದ. ದೇಹ ಕೃಶವಾಗಿದೆ. ಕಣ್ಣುಗಳು ಕೆಂಪಾಗಿವೆ;ನಿಲ್ಲಲು ಏನಾದರೊಂದು ಆಧಾರ ಬೇಕಿತ್ತು. ಸರಿಯಾಗಿಯೇ ತೀರ್ಥಸೇವನೆ ಆಗಿತ್ತು. ಕೈಯ್ಯಲ್ಲಿದ್ದ ಸಣ್ಣ ಬಾಟಲಿಯನ್ನು ಮಾತ್ರ ಬಂಗಾರವೇನೋ ಎಂಬಂತೆ ಭದ್ರವಾಗಿ ಹಿಡಿದುಕೊಂಡಿದ್ದ. 

" ಯೋ ಕಂಡಕ್ಟರಪ್ಪ.. ಟಿಕೆಟ್ ಕೊಡಂಗಿಲ್ಲೇನ ನನಗ? " ಏರುದನಿಯಲ್ಲಿ ಕೂಗಿದ. 
"ನೀ ರೊಕ್ಕ ಕೊಟ್ರ ನಾ ನಿನಗ್ ಟಿಕೆಟ್ ಕೊಡ್ತನಿ "
"ತಗೋಳೋ ಯಪ್ಪಾ.. ನಾ ಏನ್ ಕೊಡಂಗಿಲ್ಲಾ ಅಂದೆಏನ್ ಈಗ ".. ದುಡ್ಡು ಕೊಟ್ಟ. ಕಂಡೆಕ್ಟರ್ ಟಿಕೆಟ್ ಹರಿದ. 

 ಆಯ್ತಲ್ಲ ಕೆಲಸ.. ಕಂಡೆಕ್ಟರ್ ತನ್ನ ಜಾಗದಲ್ಲಿ ಕುಳಿತು ಅಂದಿನ ಲೆಕ್ಕ ಬರೆಯುತ್ತಿದ್ದ. 

ಅಸಲಿ ಮಾತು ಪ್ರಾರಂಭವಾಗಿದ್ದೇ ಆಮೇಲೆ... 

"ಏನಯ್ಯ ಕಂಡಕ್ಟ್ರಪ್ಪ.. ನೀ ಏನಂತ ತಿಳ್ಕೊಂಡಿ ನನ್ನ.. ನಂಗು ಲೆಕ್ಕ ಬರತೈತಿ "
"ಏನಾತ್ಲೆ ನಿಂಗ.. "
"ಏನ್ ರೊಕ್ಕ ನೀನೇ ಹೊಡ್ಕೋಬೇಕ್ ಮಾಡಿಯೇನಲೇ.. "
"ಏನ.. ಏನ್ ಮಾತಾಡ್ತಿ ನೀನ? ಕುಡ್ದಿದ್ದು ಜಾಸ್ತಿ ಆಗೈತೇನ್? "
"ನೋಡ ನಾ ಎಷ್ಟರ ಕುಡೀತೇನಿ.. ನಿಂಗ್ಯಾಕ್ ಅದ.. ಮೊದ್ಲ ನನ್ ರೊಕ್ಕ ನಂಗ್ ಕೊಡ "
"ಏನ್ ರೊಕ್ಕ ಲೇ... "

ಇಲ್ಲಿಯವರೆಗೆ ನಾನು ನನ್ನ ಫ್ರೆಂಡ್ ಇಬ್ಬರೂ ಅರ್ಥ ಮಾಡಿಕೊಂಡ ರೀತಿಯೇ ಬೇರೆಯಿತ್ತು. ಬಹುಶಃ ಇವನು ಜಾಸ್ತಿ ಹಣ ಕೊಟ್ಟಿದ್ದಾನೆ. ಕಂಡೆಕ್ಟರ್ ಇನ್ನೂ ಚಿಲ್ಲರೆ ಕೊಟ್ಟಿರದ ಕಾರಣ ಇವನು ಗಲಾಟೆ ಮಾಡುತ್ತಿದ್ದಾನೆ. 

ಅಥವಾ ಕುಡಿದ ಮತ್ತಿನಲ್ಲಿ ಏನೇನೋ ಹೇಳುತ್ತಿದ್ದಾನೆ ಎಂದು ನಮ್ಮಲ್ಲೇ ಮಾತನಾಡಿಕೊಂಡೆವು. 

  ಆದರೆ ಕಂಡೆಕ್ಟರ್ ಕೋಪಿಸಿಕೊಂಡಿದ್ದ. ಎಷ್ಟು ಹಣವನ್ನು ವಾಪಾಸ್ ಕೊಡಬೇಕೋ, ಅದನ್ನು ಕೊಟ್ಟಿದ್ದೇನೆ ಎಂದು ಪದೇಪದೇ ಹೇಳುತ್ತಿದ್ದರೂ ಕುಡುಕ ಮಹಾಶಯ ಕೇಳಲು ತಯಾರಿರಲಿಲ್ಲ. 

  ಆಮೇಲೆ ನಿಜ ವಿಷಯ ಏನೆಂದು ಅರ್ಥವಾಗಿದ್ದು. 

"ನಾ ಐವತ್ತ ಕೊಟ್ಟೇನಿ. ನೀ ನಂಗ ಇಪ್ಪತ್ತ್ ಕೊಟ್ಟಿ.. ಹೌದೋ ಇಲ್ಲೋ... "ಎಂದ ಕುಡುಕಪ್ಪ. 
"ನೀ ಎಲ್ಲಿ ಹತ್ತಿದಿ ಬಸ್ ಹೇಳು.. ಅಲ್ಲಿಂದ ನೀ ಎಲ್ಲಿಗ್ ಕೇಳ್ದಿ... ಅದ್ಕ ಟಿಕೆಟ್ ಮೂವತ್ತ ಆಕೇತಿ ಅಷ್ಟ ತಗೋಂಡೀನಿ "
"ನಾ ಯಾಕ್ ಪೂರಾ ರೊಕ್ಕ ಕೊಡ್ಬೇಕ? "
"ಯಾಕ ಸೀನಿಯರ್ ಸಿಟಿಜನ್ ಇದ್ದಿ ನೀನ ? ಇದ್ರ ಕಾರ್ಡ್ ಕೊಡ.. "
"ಅಲ್ಲಲೇಪಾ... ನಾ ಮುದ್ಕ ಅಲ್ಲ "
ಎಂದು ಇನ್ನೂ ಏನೇನೋ ಬಡಬಡಾಯಿಸುತ್ತಿದ್ದ. 

ಕಂಡೆಕ್ಟರ್ ತಲೆ ಕೆಟ್ಟು, ಇನ್ನೊಬ್ಬರ ಬಳಿ ತನ್ನ ಅಳಲು ತೋಡಿಕೊಂಡ. ಈ ರಾತ್ರಿ ಬಸ್ ಗೆ ಮಾತ್ರ ಡ್ಯೂಟಿ ಮಾಡ್ಬಾರ್ದು. ಎಲ್ಲ ಕುಡುಕ ನನ್ನ ಮಕ್ಕಳೇ ಇರ್ತಾರೆ. ಜೀವ ತಿಂತಾರೆ. ಎಂದೆಲ್ಲ ಹೇಳುತ್ತಿದ್ದ.
 ನಾವೆಲ್ಲ ಮೂಕ ಪ್ರೇಕ್ಷಕರು.  
ಈಗ ವಾದ ಮಂಡಿಸುವುದು ಕುಡುಕನ ಸರದಿ.. 
"ಅಲ್ಲ ಸಾರ್, ನಾನ್ ಯಾಕ್ ಪೂರಾ ರೊಕ್ಕ ಕೊಡ್ಬೇಕ್ ನೀವೇ ಹೇಳಿ. ನಾ ಅರ್ಧ ಟಿಕೆಟ್ ರೊಕ್ಕ ಕೊಡ್ತೇನಿ "
ಒಬ್ಬ ಹಿರಿಯರು ಹೇಳಿದರು.. "ನೋಡಪಾ.. ನಿಂಗ ಒಂದ ಟಿಕೆಟ್- ಮೂವತ್ತೇ ರೂಪಾಯಿ..
ಕಡಿಮೆ ಆಗ್ಬೇಕಂದ್ರ ಒಂದ ನೀ ಸೀನಿಯರ್ ಸಿಟಿಜನ್ ಆಗಿರ್ಬೇಕ ಇಲ್ಲ ಅರ್ಧಕ್ಕೆ ಬೇಕಂದ್ರ ಹತ್ತ ವರ್ಷಕ್ಕಿಂತ ಸಣ್ಣಇರ್ಬೇಕಾ... "

ಈಗ ಕಂಡೆಕ್ಟರ್ ಮಧ್ಯೆ ಬಾಯಿ ಹಾಕಿದ.. "ಕೇಳ್ದ್ಯೋ ಇಲ್ಲೋ ಅವ್ರ ಹೇಳಿದ್ನ... ನಿಂಗ ಹ್ಯಾಂಗ್ ಅರ್ಧ ಕೊಡಕ್ ಬತ್ತದ?? "
"ಇಲ್ಲ ನಾ ಪೂರಾ ರೊಕ್ಕ ಕೊಡಂಗಿಲ್ಲಾ "
"ನೋಡಪಾ.. ನಾನೂ ಪೂರಾ ರೊಕ್ಕ ಕೊಟ್ಟ ಟಿಕೆಟ್ ತಗೊಂಡೀನಿ. ಒಬ್ಬ ಮನಿಷಾ ಒಂದ ಕಡಿಂದ ಮತ್ತೊಂದ ಕಡಿಕೆ ಬಸ್ನಾಗೆ ಹೋಗ್ಬೇಕಂದ್ರ ಒಂದ್ ಟಿಕೆಟ್ ತಗೋಬೇಕ.. ನೀ ಯಾಕ್ ಅರ್ಧ ಕೊಡ್ತಿ? "ಎಂದರು ಆ ಹಿರಿಯರು.
"ನೀವ್ ಕೊಡ್ತೀರಿ ಸಾರ್. ನಾ ಕೊಡಂಗಿಲ್ಲಾ.. "
"ಅದೇ ಯಾಕ್ ಕೊಡಂಗಿಲ್ಲಾ.. "
"ನೋಡ್ರಿ ಸರ... ನಿಮ್ಗ ಸೀಟ್ ಐತಿ.. ಇಲ್ಲಿ ಎಲ್ರಿಗೂ ಸೀಟ್ ಐತಿ.. ಅರಾಮ್ ಕುಂತಾರ.. ಅದ್ಕೆ ಫುಲ್ಲು ಟಿಕೆಟ್ ತಗೊಂಡಾರ.. ಆದ್ರ ನಾ ನಿಂತೀನಿ.. ಕಾಲ್ ನೋವಾಕೈತಿ. ಡ್ರೈವರ ಬ್ರೇಕ್ ಹಾಕ್ತಾನಾ.. ನಾ ಜೋತಾಡ್ತೇನಿ.. ನಾ ಯಾಕ್ರೀ ಪೂರಾ ರೊಕ್ಕ ಕೊಡ್ಬೇಕ ? ನೋಡ್ರಿ ನೀವ್ ಹೇಳಿದ್ದ ಖರೆ.. ಇಲ್ಲಿಂದ ಮತ್ತೊಂದ್ಕಡಿಕೆ ಹೋಗ್ಬೇಕಂದ್ರ ರೊಕ್ಕ ಕೊಟ್ಟ ಒಂದ್ ಟಿಕೆಟ್ ತಗೋಬೇಕ.. ಆದ್ರೆ ನೀವ್ ಅರಾಮ್ ಕುಂತಿರಿ, ನಾನ್ ತ್ರಾಸ್ ಪಟ್ಟ ನಿಂತೇನಿ..ನಂಗ ನಿಮ್ಗ ವ್ಯತ್ಯಾಸ ಇಲ್ಲೇನ್ರಿ?"

ಈಗ ಇವನಿಗೆ ಯಾರು ಉತ್ತರ ಕೊಡ್ತಾರೆ? ಎಲ್ಲರ ಬಾಯನ್ನು ಮುಚ್ಚಿಸಿದ. ಅವನು ಹೇಳಿದ್ದು ತಪ್ಪೇನಿರಲಿಲ್ಲ. ಕುಡುಕಪ್ಪ ಬುದ್ಧಿವಂತ ಅಂತ ಅನಿಸಿದ್ದು ಸುಳ್ಳಲ್ಲ. ಆದರೆ ಕುಡಿದಾಗ ಮಾತ್ರ ಬುದ್ಧಿವಂತನೇನೋ ಎಂಬ ಸಣ್ಣ ಅನುಮಾನವೂ ಇದೆ... !!

ಕಂಡೆಕ್ಟರ್ -ಇಂತಹ ಭಂಡರಿಗೆ ಯಾರು ಉತ್ತರ ಕೊಡ್ತಾರೆ. ಏನಾದ್ರೂ ಮಾಡ್ಕೊಳ್ಳಿ ಎಂದು ಗೊಣಗುತ್ತ ಕುಳಿತ.. 

"ಅಲ್ಲಪಾ.. ಕಾನೂನ್ ಹಾಂಗ್ ಹೇಳತೈತಿ.. ನೀ ಏನಾರ ಅನಕಂಡ್ರೆ ಯಾರ್ ಏನ್ ಮಾಡ್ಯಾರ? "
"ಯಾವದಪಾ ಕಾನೂನ? ಒಬ್ಬರಿಗೊಂದ ಇನ್ನೊಬ್ಬರಿಗೊಂದ ಹೇಳತೈತೇನ ನಿಮ್ಮ ಕಾನೂನ? ನಮ್ಗ ಬರಂಗಿಲ್ಲ ಅಂತ..ನಿಮ್ಗ ಬೇಕಾದಂಗ ನೀವ್ ಹೇಳ್ತಿರಿ.. ನನ್ ರೊಕ್ಕ ನಂಗ್ ಕೊಡಿಸ್ರಿ... "
"ಸಾರ್.. ಅವಂಗೆ ಎಷ್ಟ್ ಹೇಳಿದ್ರು ಅಷ್ಟೇ.. ಬುಟ್ಬುಡಿ "ಎಂದ ಕಂಡೆಕ್ಟರ್.. 

ಈಗ ಕುಡುಕ ಪೂರ್ತಿ ಕಂಡೆಕ್ಟರ್ ಮೇಲೆ ಹರಿಹಾಯ್ದ. "ನೀ ಮಾತಾಡ್ಬ್ಯಾಡ... ಹಿಂಗ ಕಾನೂನ, ಮೊತ್ತೊಂದ ಅಂತ ಎಲ್ಲ ರೊಕ್ಕ ನೀನ ಇಟ್ಕೋತಿ..
ನಿಮ್ಮ ಕಾನೂನ್ ಸರಿಗಿಲ್ಲ.. ಅದ್ನ ಮಾಡಿದೋನ ತಂದ ಒಂದ್ಸಲ ಬಸ್ಸಿನ್ಯಾಗ ನಿಲ್ಸಿ.. ಆಗ ಅವ್ನ ನೋಡಿ, ಚೇಂಜ್ ಮಾಡ್ತಾನ " ಎಂದೆಲ್ಲ ಕೂಗಿ ಮುಗಿಸುವ ಹೊತ್ತಿಗೆ ಅವನು ಇಳಿಯುವ ಜಾಗ ಬಂದಿತ್ತು.. ಹೇಗೋ ಕಷ್ಟ ಪಟ್ಟು ಅವನನ್ನು ಇಳಿಸಿ ಹೊರಟರೂ, ಬಸ್ಸು ಕಣ್ಣಿಗೆ ಕಾಣುವವರೆಗೂ ಕೂಗುತ್ತಿದ್ದ. 

ನಾವು ಊರಿಗೆ ಹಿಂತಿರುವವರೆಗೂ ಮನಸಿನಲ್ಲಿ ಉಳಿದುಹೋದ. 

ನಾವು ಮಾತನಾಡಿಕೊಂಡೆವು. ಸರಿ ಅಲ್ವಾ ಅವ್ನು ಹೇಳಿದ್ದು.. ಕುಡುಕ ಅಂತ ಅವ್ನು ಹೇಳಿದ್ದೆಲ್ಲ ತಪ್ಪು ಅನ್ನೋಕೆ ಆಗಲ್ಲ.. ಎಷ್ಟು ನಿಜ ಇತ್ತು.. ಎಲ್ಲೋ ಯಾರೋ ಕುತ್ಕೊಂಡು ಕಾನೂನು ಮಾಡ್ತಾರೆ.. ಅನುಭವಿಸೋರಿಗೆ ಗೊತ್ತು ಕಷ್ಟ... ಏನೇ ಇರಲಿ.. ಅವತ್ತು ಬಸ್ಸಿನಲ್ಲಿ ಒಬ್ಬ ಬುದ್ಧಿವಂತನನ್ನು ಕಂಡೆ.

ಆದರೆ ಬೆಂಗಳೂರಿಗೆ ಬಂದು, ಬಿ. ಎಂ. ಟಿ. ಸಿ. ಹತ್ತಿದಮೇಲೆ ಗೊತ್ತಾಗಿದ್ದು.. ಇಲ್ಲಿ ಸೀಟ್ ಮೇಲೆ ಕುಳಿತೋರಿಗಿಂತ ಜಾಸ್ತಿ, ನಿಂತು, ಜೋತಾಡಿಕೊಂಡು ಹೋಗುವವರೇ ಇರುತ್ತಾರೆ. ಹಾಗೇನಾದರೂ ನಿಂತುಕೊಂಡು ಹೋಗುವವರಿಗೆ ಅರ್ಧ ರೇಟ್ ನಲ್ಲಿ ಟಿಕೆಟ್ ಕೊಡಲು ಪ್ರಾರಂಭಿಸಿದರೆ, ಸರಕಾರ ಎಲ್ಲಿಗೆ ಹೋಗ್ಬೇಕು? 

ಮತ್ತೆ ನೀವ್ಯಾರು ಬಿ. ಎಂ. ಟಿ. ಸಿ. ಕಂಡೆಕ್ಟರ್ ಬಳಿ ಈ ವಿಷಯಕ್ಕೆ ಜಗಳ ತೆಗೆಯಬೇಡಿ.. ಈಗಲೇ ಒಂದು ಪ್ರಯಾಣದಲ್ಲಿ ಕಡಿಮೆ ಎಂದರೂ ನಾಲ್ಕು ಜಗಳಗಳು ಪ್ರತಿದಿನ ಕಾಣಸಿಗುತ್ತವೆ. ಮಧ್ಯೆ ಇದೊಂದು ಬೇಡ. 

ಇದು ಕೇವಲ ಕುಡುಕ ಬುದ್ಧಿವಂತರ ತರ್ಕ.. ಅದೂ ಕುಡಿದಾಗ ಮಾತ್ರ..........

No comments:

Post a Comment

ಹೆಣ್ಣು