Saturday, June 13, 2020

ನಮ್ಮೂರಿನಲ್ಲೊಬ್ಬ ಮುಖ್ಯಮಂತ್ರಿ

ನಾನು ಚಿಕ್ಕ ವಯಸ್ಸಿನಿಂದಲೂ ಆತನನ್ನು ನೋಡಿದ್ದೇನೆ. ಸಾಯಂಕಾಲ ಅಚ್ಚುಕಟ್ಟಾಗಿ ಬಿಳಿ ಅಂಗಿ, ಬಿಳಿ ಪಂಚೆ ಧರಿಸಿ ಆತ ಹೊರಟೆನೆಂದರೆ ಎಲ್ಲಾ ಒಮ್ಮೆ ತಿರುಗಿ ನೋಡಬೇಕು, "ಓಹ್ ಇನ್ನು ರಾತ್ರಿಯಿಡೀ ಮಧ್ಯರಸ್ತೆಯಲ್ಲಿ ಇವನದೇ ದರ್ಬಾರ್" ಎಂದು ಯೋಚಿಸುತ್ತಾ !!

     ಸಂತೆಯ ದಿನವಂತೂ ಸಮಯದ ಪರಿವೆಯೇ ಇರುತ್ತಿರಲಿಲ್ಲ. ರಸ್ತೆಯನ್ನು ಅಳತೆ ಮಾಡುತ್ತಾ ಬರುತ್ತಿರುವನೇನೋ ಎಂಬ ಅನುಮಾನ ಕಾಡುತ್ತಿತ್ತು! ಒಮ್ಮೊಮ್ಮೆ ವಾಹನಗಳು ಬಂದಾಗ ಅವನು ದಾರಿ ಬಿಡುವುದಿರಲಿ, ವಾಹನಗಳೇ ಅವನಿಗೆ ದಾರಿ ಬಿಟ್ಟುಕೊಟ್ಟು ರಸ್ತೆಯಂಚಲ್ಲಿ ಸಾಗುತ್ತಿದ್ದವು. ಹಾಗೆ ಗಾಡಿಗಳು ತಮ್ಮ ಪಾಡಿಗೆ ತಾವು ಹೋದರೂ ಸುಮ್ಮನಿರುವ ಜಾಯಮಾನ ಇವನದಲ್ಲ ಅಥವಾ ಇವನ ಹೊಟ್ಟೆಯಲ್ಲಿದ್ದ ದೇವರು ಹಾಗೆ ಸುಮ್ಮನೆ ನಿಲ್ಲಲು ಬಿಡುತ್ತಿರಲಿಲ್ಲವೋ ಏನೋ! ಜೋರಾಗಿ "ನಮಸ್ಕಾರ ಸಾರ್" ಎಂದು ಕೂಗುತ್ತಾ ಎರಡೂ ಕೈಗಳನ್ನೂ ಮೇಲಕ್ಕೆತ್ತಿ ತೂರಾಡುತ್ತ ನಮಸ್ಕಾರಾಸನ ಮಾಡುತ್ತಿದ್ದ.  .

      ಇನ್ನೇನು ರಾತ್ರಿ ಊರವರೆಲ್ಲ ದೀಪ ಆರಿಸಿ ಮಲಗಬೇಕು, ಅಷ್ಟರಲ್ಲಿ ಹಾಜರಾಗುತ್ತಿದ್ದ.ಮಜವೇನೆಂದರೆ ಹಗಲು "ನಾ ಬರಕಲ್ಲ, ನಾಳೆ ಸ್ಯಾನೆ ಕೆಲ್ಸ ಐತೆ. ಬ್ರೇಸ್ತಾರ (ಗುರುವಾರ ) ಟೆಮ್ (ಟೈಮ್ ) ಆದ್ರೆ ಬತ್ತುನಿ" ಎಂದು ಹೇಳುವವನು, ರಾತ್ರಿ ಸರಿಯಾಗಿ ಹೊಟ್ಟೆಗೆ ತೀರ್ಥ ಬಿದ್ದರೆ, ಶುದ್ಧ ಕನ್ನಡದಲ್ಲಿ ಸ್ಫುಟವಾಗಿ ಯಕ್ಷಗಾನದ ಪದ್ಯಗಳನ್ನು ಹೇಳುತ್ತಿದ್ದ. 

   ಒಂದು ಕಲೆಯ ಮೇಲೆ ಅವನಿಗೆ ಎಷ್ಟು ಪ್ರೀತಿಯಿತ್ತೆಂದು ರಾಗವಾಗಿ ಹಾಡುವಾಗಲೇ ಅರ್ಥವಾಗುತ್ತಿತ್ತು. ಒಂದು ದಿನ ' ನವಿಲು ಕುಣಿಯುತಿದೆ ನೋಡ' ಎಂದು ಹಾಡಿದರೆ, ಮತ್ತೊಂದು ದಿನ 'ರಂಗನಾಯಕ ರಾಜೀವ ಲೋಚನ ' ಎಂದು ಹಾಡುತ್ತಿದ್ದ. 

  ಒಂದು ಮನೆಯ ಮುಂದೆ ಎಷ್ಟು ಹೊತ್ತು ನಿಂತು, ಒಂದೇ ಸಾಲನ್ನು ಎಷ್ಟು ಬಾರಿ ಹಾಡುತ್ತಾನೆ ಎನ್ನುವುದರ ಮೇಲೆ ಅಂದು ಅವನು ಎಷ್ಟು ಕುಡಿದಿದ್ದ ಎಂದು ಅಂದಾಜಿಸಬಹುದಿತ್ತು. ಹಾಗಾಗಿಯೇ ಸಂಜೆ ಏಳಕ್ಕೆ ಆತ ಸಂತೆಯಿಂದ ಹೊರಟರೂ ರಾತ್ರಿ ಮನೆ ಸೇರುವುದು ಮಾತ್ರ ಹನ್ನೆರಡರ ಆಸುಪಾಸಿನಲ್ಲಿ!!
ಮೊದಲೆಲ್ಲ ನನಗೆ ಆತನನ್ನು ಕಂಡರೆ ಭಯವಿತ್ತು, ಆದರೆ ಒಮ್ಮೆ ಹುಚ್ಚು ಆಸೆ ಮೊಳೆತಿತ್ತು. ಅವನು ಹೀಗೆ ಕುಡಿದು ಹಾಡುತ್ತ ರಸ್ತೆಯಲ್ಲಿ ಬರುವಾಗ, ಅವನೆದುರು ಹೋಗಿ ನಿಂತು ಮಾತನಾಡಿಸಬೇಕು, ಏನು ಹೇಳುತ್ತಾನೆಂದು ನೋಡಬೇಕು..

ಆ ಸಂದರ್ಭ ಕೂಡ ಬಂತು. ಅಂದು ಅಪ್ಪ ಅವನೆದುರು ನಿಂತು ಮಾತನಾಡಿಸಿದರೆ, ಆ ವ್ಯಕ್ತಿ ಪ್ರತಿಕ್ರಿಯಿಸುವುದಿರಲಿ, ತಲೆ ಎತ್ತಿ ನೋಡಲೂ ಇಲ್ಲ. ನಡು ರಸ್ತೆಯಲ್ಲಿ ಧಡ್ ಎಂದು ಅವರ ಕಾಲಿಗೆ ಬಿದ್ದ. ಬಿಡೋ ಎಂದರೆ ಬಿಡುತ್ತಲೂ ಇಲ್ಲ. ಎಲ್ಲಿ ಕಾಲು ಎಳೆದು ಅಪ್ಪನನ್ನು ಕೆಳಗೆ ಬೀಳಿಸುತ್ತಾನೋ ಎಂಬ ಭಯ ನನಗೆ!

  "ಹೆಗಡೇರು ನಿಮ್ಮ ಆಸೀರಾದ(ಆಶೀರ್ವಾದ) ಬೇಕು ನಂಗೆ. ಬುಡಕಿಲ್ಲಾ ಅಂದ್ರೆ ಬುಡಕಿಲ್ಲ " ಎನ್ನುತ್ತಿದ್ದ. ನಂತರ ಎದ್ದು ನಿಂತು ನನಗೊಮ್ಮೆ, ಅವರಿಗೊಮ್ಮೆ ನಮಸ್ಕರಿಸಿ ಕಷ್ಟಪಟ್ಟು ನಡೆದು ಹೊರಟ. 

    ಒಂದು ಸಂಜೆ ತಮ್ಮನೊಡನೆ ರಸ್ತೆಯಂಚಲ್ಲಿ ವಾಯುವಿಹಾರಕ್ಕೆಂದು ಹೋದಾಗ ಈತ ಪೇಟೆ ಕಡೆಯಿಂದ ಬರುತ್ತಿದ್ದ. ಇನ್ನು ಕೇವಲ ಏಳು ಗಂಟೆ, ಇಷ್ಟು ಬೇಗ ಕುಡಿದಿರಲಾರ ಎಂದುಕೊಳ್ಳುವಷ್ಟರಲ್ಲಿಯೇ, ನನ್ನ ಊಹೆ ತಪ್ಪೆಂದು ತಿಳಿಯಿತು. ಒಮ್ಮೆ ರಸ್ತೆಯ ಬಲಕ್ಕೂ, ಮತ್ತೊಮ್ಮೆ ಎಡಕ್ಕೂ ಸುಳಿದಾಡುತ್ತ, ಆಕಾಶ ನೋಡುತ್ತಾ ಬರುವವನನ್ನು ನೋಡಿದರೆ ಯಾರು ಬೇಕಾದರೂ ಹೇಳುತ್ತಿದ್ದರು, ಚೆನ್ನಾಗಿಯೇ ಸುರಾಪಾನವಾಗಿದೆ ಎಂದು.. !

   ಅದು ಕರ್ನಾಟಕ ಲೋಕಸಭಾ ಚುನಾವಣೆಯ ಸಂದರ್ಭ ಬೇರೆ. ದೂರದರ್ಶನ, ದಿನಪತ್ರಿಕೆ ಅಷ್ಟೇ ಏಕೆ, ಪ್ರತಿ ಮನೆಯ ಜಗುಲಿಯಲ್ಲೂ, ಪ್ರತಿ ಅಂಗಡಿಯ ಎದುರಲ್ಲೂ ಚುನಾವಣೆಯ ಮಾತುಕತೆಯೇ ನಡೆಯುತ್ತಿತ್ತು.  

      ಇವನೂ ಕುಡಿದ ಅಮಲಿನಲ್ಲಿದ್ದ. ನೇರವಾಗಿ ನಮ್ಮ ಬಳಿ ಬಂದ. " ತಂಗಿ, ಅರಾಮೈದಿಯೇ? ಓಹೋಹೋ.. ಸಣ್ಣ ಹೆಗಡೇರು ಇಲ್ಲೇ ಐದಾರೆ..ಇಲ್ಲೆಂತ ಮಾಡ್ತಾ ಐದಿರಿ? " ನಾವು ಮಾತನಾಡದೆ ಸುಮ್ಮನೆ ನಿಂತಿದ್ದೆವು. 

" ತಂಗಿ ಮತ್ತೆ ಈ ಸಲ ಎಲೆಕ್ಸನ್ನಿಗೆ ನಿಂತಿವ್ನಿ. ನಂಗೆ ವೋಟ್ ಹಾಕ್ಬೊಕು. ಬ್ಯಾರೆ ಯಾರ್ಗೂ ಹಾಕಂಗಿಲ್ಲ"

" ಯಾವದಕ್ಕೆ ನಿಂತಿದಿಯೊ ನೀನು? ಎಮ್.ಎಲ್.ಎ. ಆಗ್ಬೇಕು ಅಂತ ಅಂದ್ಕೊಂಡಿದ್ದೀಯಾ?" ಎಂದು ಕೇಳಿದೆವು. 

"ಅದ್ನೆಲ್ಲ ನಂಗ್ ಯಾರ್ ಕೊಡ್ತಾರ್ರಾ? ನಾ ಮುಕ್ಮಂತ್ರಿ ಶೀಟಿಗೆ (seat) ನಿಂತೀನಿ "

"ಅಲ್ಲೋ ಅದನ್ನಾದ್ರೂ ಸರಿ ಹೇಳು.. ಮುಕ್ಮಂತ್ರಿ ಅಲ್ಲ, ಮುಖ್ಯಮಂತ್ರಿ. "

- ಎನ್ನುವಷ್ಟರಲ್ಲಿ ಊರವರು ಯಾರೋ ಬಂದರು, "ಅವನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಬಿಡು, ಮುಖ್ಯಮಂತ್ರಿ, ಮುಕ್ಕೋಮಂತ್ರಿ ಎಲ್ಲಾ ಒಂದೇ " 

-ಎಂದು ಹೇಳಿ ನಗುತ್ತಾ ಹೋದರು. 

  ಅವನಿಗೆ ಏನು ಅರ್ಥವಾಯಿತೋ ಏನೋ, "ಎಲ್ಲಾ ಅಂಗೇ ಬುಡಿ, ನಾ ಹಮಾ (ಸಮ) ಮಾಡ್ತುನಿ. " ಎನ್ನುತ್ತಾ ಹೋದ.  

  ಮುಂದೆಯೂ ಮಾತು ಕೇಳುತ್ತಿತ್ತು, "ನಾ ಏನಾರ ಮುಕ್ಮಂತ್ರಿ ಆರೆ (ಆದ್ರೆ ) ಊರ್ ಹಿಂಗಿರಾಕಿಲ್ಲ, ಬ್ಯಾರೇನೇ ಐತಿ"...... 

  ಅದೇನು ಮಾಡುತ್ತಾನೋ ಏನೋ ನಾಕಾಣೆ, ಆದರೆ ನಮ್ಮೂರಲ್ಲೊಬ್ಬ ಮುಕ್ಮಂತ್ರಿ ಅಲ್ಲಲ್ಲ, ಮುಖ್ಯಮಂತ್ರಿ ಇದಾನೆ ಅನ್ನೋದಂತೂ ಸತ್ಯ..!!!

No comments:

Post a Comment

ಹೆಣ್ಣು