Monday, June 15, 2020

ಮಲೆನಾಡಿನ ಹಿರಿಜೀವ

ಲೇಯ್ ಸಾವಿತ್ರಮ್ಮಾ,
ಇದು ನಾನು ಅವಳನ್ನು ಪ್ರೀತಿ ಹೆಚ್ಚಾದಾಗ ಕರೆಯೋ ರೀತಿ.  ಬಾಗಿದ ಬೆನ್ನು, ಸುಕ್ಕುಬಿದ್ದಿರುವ ಮುಖ, ವಯಸ್ಸಾಗಿದೆ ಎನ್ನಲು ಇಷ್ಟು ಸಾಕು. ಜೀವನದಲ್ಲಿಯ ಜವಾಬ್ದಾರಿಗಳ ಭಾರ ಅವಳನ್ನು ಬಾಗಿಸಿರಬಹುದು. ಅವಳ ಮುಖದಲ್ಲಿನ ಸುಕ್ಕುಗಳು ಅವಿರತ ಕೆಲಸಗಳ ಪ್ರತಿಫಲವಾಗಿರಬಹುದು.
'ಅವಳ ಹಲ್ಲುಗಳು ಕೃತಕವಿರಬಹುದು ಆದರೆ ನಗುವಲ್ಲ. '
          
       ಆ ಕಣ್ಣುಗಳಲ್ಲಿ ಹೊಳಪು ಇನ್ನೂ ಮಾಸಿಲ್ಲ. ಕೆಲವೊಮ್ಮೆ 'ಆಯಾಸ ಪದದ ವಿರುದ್ಧಾರ್ಥಕ ಶಬ್ದವೇ  ಜೀವ ತಳೆದು ಓಡಾಡುತ್ತಿದೆಯೇನೋ' ಎನಿಸುವಷ್ಟು ಚಟುವಟಿಕೆಯಿಂದಿರುತ್ತಾಳೆ.

       ಮುಂಜಾನೆ ಐದು ಗಂಟೆಗೆ ಅವಳ ಸುಪ್ರಭಾತ ಗೀತೆಗಳೊಂದಿಗೆ ದಿನ ಪ್ರಾರಂಭವಾದರೆ, ರಾತ್ರಿ ಕಣ್ಣು  ಆಯಾಸದಿಂದ  ನೆನಪಿಸಬೇಕು ಇದು ಮಲಗುವ ಸಮಯ ಎಂದು, ಆದರೂ  ಅವಳ ಕೆಲಸಗಳು ಮುಗಿದಿರುವುದಿಲ್ಲ. ಅದರಲ್ಲೂ  ಹಬ್ಬ ಬಂದರಂತೂ  ಮುಗಿದೇ ಹೋಯಿತು.! ಯಾವಾಗ ಮಲಗುತ್ತಾಳೆ, ಎಷ್ಟು  ಗಂಟೆಗೆ  ಏಳುತ್ತಾಳೆ ಎಂದು ಯಾರಿಗೂ ತಿಳಿಯುವುದಿಲ್ಲ.ಆದರೂ ನನಗೆ ಅವಳ ಮೈಂಡ್ -ಸೆಟ್  ಎಷ್ಟೋ ಬಾರಿ ಆಶ್ಚರ್ಯ ತರಿಸಿದೆ. ಯಾವುದೇ ಅಲಾರ್ಮ್  ಇಡದೇ,  ನಾಳೆ  ಬೇಗ  ಏಳಬೇಕು ಎಂದುಕೊಂಡರೆ,  ಎದ್ದೇ ಏಳುತ್ತಾಳಲ್ಲ ಹೇಗೆ  ಸಾಧ್ಯ?  ಇದು ಇಂದೂ ಅವಳು  ಲವಲವಿಕೆಯಿಂದಿರುವ  ಗುಟ್ಟಾಗಿರಬಹುದು...
   ಇಂದಿಗೂ  ತರಕಾರಿಗಳನ್ನು  ಬೆಳೆಯುತ್ತಾಳೆ, ಮನೆಗೆ ಬಂದವರಿಗೆಲ್ಲ  ಕೊಟ್ಟು ಕಳುಹಿಸುತ್ತಾಳೆ, ಅದರಲ್ಲೇ ಖುಷಿ ಪಡುತ್ತಾಳೆ. ಎಪ್ಪತ್ತರ ಹರೆಯದಲ್ಲೇ ಇಷ್ಟು ದುಡಿಯುವವಳು,  ಇಪ್ಪತ್ತರಲ್ಲಿ  ಹೇಗಿರಬಹುದು ಎಂದೂ  ನಾನು ಊಹಿಸಲಾರೆ..!
ಇನ್ನೂ  ನೆನಪಿದೆ ನನಗೆ,  ಅಜ್ಜಿ  ನೀನು ಕಷ್ಟ ಪಟ್ಟು  ಬೆಳೆಸಿ  ಊರವರಿಗೆಲ್ಲ  ಹಂಚುತ್ತೀಯಲ್ಲ  ಯಾಕೆ ಎಂದರೆ,  "ನಮ್ಮಲ್ಲಿ  ಇದ್ದಾಗ  ಮಾತ್ರ ನಾವು  ಕೊಡೋದು  ತಾನೇ,  ಇಲ್ದೆ ಇದ್ರೆ ಕೊಡೋಕೆ ಆಗತ್ತಾ?"  ಅಂತಾಳೆ...ಅದನ್ನು  ಅವಳು  ಹೊಸತಾಗಿ  ಹೇಳಬೇಕೆಂದೇನಿಲ್ಲ. ನಾನಾಗಲೇ ಕೇಳಿದ್ದೆ,  ಕೆಲವರು  ಮನೆಗೆ  ಬಂದಾಗ  ಹೇಳುತ್ತಿದ್ದರು- ನಾವು  ಶಾಲೆಗೆ  ಹೋಗುವಾಗ  ನಿಮ್ಮ ಮನೆಯಲ್ಲಿ  ಊಟ  ಮಾಡ್ಕೊಂಡು  ಹೋಗ್ತಿದ್ವಿ.  ನಿಮ್ಮ  ಅಜ್ಜಿ ತುಂಬಾ  ರುಚಿಯಾಗಿ  ಅಡಿಗೆ  ಮಾಡ್ತಾಳೆ  ಅಂತ. ಇಷ್ಟು ವರ್ಷಗಳಲ್ಲಿ ಆ ಕೈಗಳು ಎಷ್ಟು ಜನರಿಗೆ ಊಟ ಹಾಕಿರಬಹುದು!!
ಅವಳು ಮೂರನೇ ತರಗತಿಯವರೆಗೆ ಮಾತ್ರ ಕಲಿತಿದ್ದರೂ,  ಓದುವ ಮಕ್ಕಳಿಗೆ ಊಟ ಹಾಕಿ,  ಪರೀಕ್ಷೆ ಇದ್ದಾಗ ಮನೆಯಲ್ಲಿ  ಉಳಿಸಿಕೊಳ್ಳುತ್ತಿದ್ದಳಂತೆ. ಇದು ಅವಳು ವಿದ್ಯೆಗೆ ಕೊಡುವ ಗೌರವ..

       ಅವಳು  ತುಂಬಾ ಪ್ರಾಕ್ಟಿಕಲ್. ಶಾಸ್ತ್ರಗಳನ್ನು  ಪಾಲಿಸುತ್ತಾಳೆ. ಆದರೆ  ಕೆಲವೊಮ್ಮೆ  "ಅಜ್ಜಿ  ಇದು ಬರಿ ಮೂಢ ನಂಬಿಕೆ  ಈಗಿನ  ಕಾಲದಲ್ಲೂ  ಇದನ್ನೆಲ್ಲಾ ಮಾಡೋಕಾಗಲ್ಲ"  ಅಂತ ಕಾರಣ ಸಹಿತ ವಿವರಿಸಿದ್ರೆ,  ಅದೆಷ್ಟು  ಬೇಗ ಈಗಿನ ಕಾಲಕ್ಕೆ ಅಂದರೆ  ಮೊಮ್ಮಕ್ಕಳ  ಕಾಲಕ್ಕೆ ಹೊಂದಿಕೊಂಡುಬಿಟ್ಟಳು.
ಹಿಂದಿನ ಕಾಲದವರಂತೆ  ಜಾತಿಗಳನ್ನೆಲ್ಲ ನೋಡುವುದಿಲ್ಲ  ಅವಳು.  ಕೆಲಸದವರಿಗೂ  ತಾನು ಬೆಳೆದಿದ್ದರಲ್ಲಿ,  ಮಾಡಿದ  ಅಡಿಗೆಯಲ್ಲಿ  ಒಂದು ಪಾಲು ಕೊಡುತ್ತಾಳೆ.ಅವಳ ನಿಷ್ಕಲ್ಮಶ ಮನಸು ಅದು.. 
     ಆದರೂ  ಅವಳ  ನೆನಪಿನ ಶಕ್ತಿ  ನೋಡಿದರೆ ನನಗೂ,  ನನ್ನಮ್ಮನಿಗೂ ಇವತ್ತಿಗೂ ಆಶ್ಚರ್ಯ. ಯಾರೋ ಹಳೆಯ ಬಂಧುಗಳು ಬಂದರೂ  ಸಾಕು,  ಅವರಿಗೆ ಯಾವ ತಿಂಡಿ ಇಷ್ಟ ಎಂದು ನೆನಪಿಂದ ಮಾಡಿ ಬಡಿಸುತ್ತಾಳೆ.
ಎಲ್ಲೋ ಒಮ್ಮೊಮ್ಮೆ ನಾನು ಅವಳ  ಬಳಿ ಹಳೆಯ ಕತೆಗಳನ್ನು ಕೇಳುತ್ತೇನೆ.. ಅವಳ ಮಕ್ಕಳ ಮದುವೆಗೆ ಯಾವ ಸ್ವೀಟ್  ಮಾಡಿದ್ರು   ಅಂದ್ರೆ ಹೇಳ್ತಾಳೆ.. ಅದೆಲ್ಲ ಹೋಗಲಿ,   ಅವಳ ಮದುವೆಯ ಕತೆಯನ್ನು ನಿನ್ನೆ -ಮೊನ್ನೆ ನಡೆದ ತರಹ ವಿವರಿಸುತ್ತಾಳೆ. ಅಬ್ಬಬ್ಬಾ,  ಅಜ್ಜಿಯ ಮೆಮೊರಿ ಪವರ್ ಸ್ವಲ್ಪ ಆದ್ರೂ ನಂಗಿರ್ಬಾರ್ದ ಅಂತ ಅನ್ನಿಸಿದ್ದು ಸುಳ್ಳಲ್ಲ !!
 
       ಕೇವಲ ನನ್ನ ಅಜ್ಜಿ ಮಾತ್ರವಲ್ಲ, ಪ್ರತಿ  ಹಳ್ಳಿಯಲ್ಲಿಯೂ ಇಂತಹ ಹೆಂಗಸರು ಕಾಣಸಿಗುತ್ತಾರೆ. ಇವರೆಲ್ಲ ಮಲೆನಾಡಿನ  ಹಿರಿಜೀವಗಳು. ಇಡೀ  ದಿನ ಕೆಲಸ ಮಾಡುತ್ತಲೇ ಇರುತ್ತಾರೆ. ಯಾರೇ ಬಂದರೂ, ಎಂತಹ ಕಷ್ಟವೇ ಇದ್ದರೂ ಊಟ ಬಡಿಸಿ,  ಪ್ರೀತಿಯಿಂದ ಮಾತನಾಡುತ್ತಾರೆ. 
      ಆದರೆ ನಾವೆಲ್ಲ ಅವರನ್ನು ಕಳೆದುಕೊಳ್ಳುತ್ತಿದ್ದೇವೆ. ನಾವಾಗಿಯೇ ಅವರಿಂದ ದೂರಾಗಿಯೋ,  ಓದು -ಕೆಲಸ ಎಂದು ದೊಡ್ಡ ನಗರಕ್ಕೆ ಹೋಗಿಯೋ ಅವರನ್ನು ನಿರ್ಲಕ್ಷಿಸುತ್ತೇವೆ.....
ಪುಟ್ಟ ಮಕ್ಕಳು ತಮ್ಮ ಅಜ್ಜ -ಅಜ್ಜಿಯರ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ.  
        ಅವರೊಡನೆ  ಆಡುವ ಆಟ,
ಅವರಿಗೆ  ಕೊಡುವ ಕಾಟ, 
ರಾತ್ರಿ ಮಲಗುವಾಗ  ಕೇಳುವ  ಕತೆಗಳು, 
ಅಪ್ಪ ಬೈದಾಗ  ಅಜ್ಜ -ಅಜ್ಜಿಗೆ  ಕೊಡುವ ದೂರುಗಳು....... ಆಹಾ  ಎಷ್ಟೊಂದು  ನೆನಪುಗಳು ಇವೆ ನನ್ನ ಬಳಿ.... !!

    ಮೊನ್ನೆ ಮೊನ್ನೆ ತಾನೇ ಮನೆಗೆ ಹೋಗಿ ಬಂದರೂ, ಫೋನ್ ಮಾಡಿದಾಗ ಅಜ್ಜಿ ಕೇಳುವುದು ಮೂರೇ ಪ್ರಶ್ನೆಗಳು -
" ಆರಾಮಾವಾಗಿದ್ದೀಯಾ? ", 
" ಊಟ  ಮಾಡಿದ್ಯಾ? ",
"ಮನೆಗೆ  ಯಾವಾಗ ಬರ್ತೀಯಾ? "
ಮೊದಲೆರಡು  ಪ್ರಶ್ನೆಗಳಿಗೆ  ಉತ್ತರ ಇದೆ.  ಮೂರನೆಯದಕ್ಕೆ  ಮಾತೇ  ಹೊರಡುವುದಿಲ್ಲ.

"ಬರ್ತೀನಿ  ಅಜ್ಜಿ... ಬೇಗ ಬರ್ತೀನಿ. "
                                
 -ಚಿತ್ರ  ಹಾಗೂ  ಬರಹ
  ಪಲ್ಲವಿ

No comments:

Post a Comment

ಕರಗುವೆ...