Saturday, June 27, 2020

ಪ್ರತಿಜ್ಞೆ


ಮದುಮಗಳಂತೆ ಸುಂದರವಾಗಿ ಅಲಂಕೃತವಾಗಿತ್ತು ಆ ಕಟ್ಟಡ . ಆದರೆ ಒಳಗೆ ಅನಿರ್ವಚನೀಯ ಮೌನ , ಯಾರೆಂದರೆ ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ . ಅದು ತ್ರಿಕಾಲಪುರಿಯ ಪ್ರೌಢಶಾಲೆ , ಅಂದು ಅಲ್ಲಿನ ಹತ್ತನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭ . ( ವೇದಿಕೆ ಸಿದ್ಧವಾಗಿತ್ತು , ಎಲ್ಲರೂ ಆಸೀನರಾಗಿದ್ದರು . ಆದರೆ  ಕಣ್ತುಂಬುವ ಸಂದರ್ಭ . ಮದುವೆಯಾಗಿ  ತವರಿನಿಂದ ಗಂಡನಮನೆಗೆ ಹೊರಡುವ ವಧುವಿನ ಸ್ಥಿತಿಯಲ್ಲಿ ಮಕ್ಕಳು ! 
ಈ ನಂಟು ಕೇವಲ ಮೂರೇ ವರ್ಷದ್ದಿರಬಹುದು , ಆದರೆ ನೂರು ವರ್ಷವಾದರೂ ಮಾಸದ ಸ್ನೇಹದ ಬುತ್ತಿ ; ನೆನಪಿನಂಗಳ. ನೆಚ್ಚಿನ ಮಿತ್ರರ , ಶಿಕ್ಷಕರ ಹಸ್ತಾಕ್ಷರ ಹಾಳೆಯಲ್ಲಿ ಅಷ್ಟೊತ್ತಿದ್ದರೆ , ಅವರ ನಗುಮುಖ . ಎಂದೂ ಅಳಿಸದಂತೆ ಮನದಲ್ಲಿ ಮೂಡಿತ್ತು . ಪ್ರತಿ ವರ್ಷವೂ ಇದೇ ಸ್ಥಿತಿಯಾದರೂ , ಬೇಸರ ಮಾತ್ರ ತಪ್ಪದು . 
ಎಲ್ಲಾ ಮಕ್ಕಳಿಗೂ ಮೋಹನ್ ಸರ್ ಕಂಡರೆ ಗೌರವ , ಪ್ರೀತಿ . ಅವರ ಮಾತಿಗಾಗಿ ಕಾಯುತ್ತಿದ್ದವರೆಲ್ಲರಿಗೂ ಅವರ ಸುಳಿವೇ ಸಿಗಲಿಲ್ಲ . ಕೊನೆಯಲ್ಲಿ ತಮ್ಮೊಡನೆ ನಡೆಯಲೂ ಕಷ್ಟಪಡುತ್ತಿದ್ದ ಒಬ್ಬ ವೃದ್ಧನನ್ನು ಮೋಹನ್ ಸರ್  ಕರೆತಂದಾಗ ಎಲ್ಲರಿಗೂ ಆಶ್ಚರ್ಯ ! 
ಮೋಹನ್ ಸರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು . ಏಕೆಂದರೆ ಅವರು ಕೇವಲ ಶಿಕ್ಷಕನಾಗಿರಲಿಲ್ಲ , ಎಲ್ಲ ಮಕ್ಕಳಿಗೂ ಗೆಳೆಯನಾಗಿದ್ದರು . ಪ್ರತಿದಿನವೂ ಎಲ್ಲರೊಡನೆ ನಗುತ್ತ ,ನಗಿಸುತ್ತಿದ್ದರು . ಇಂದು ಅವರ ಮುಖದಲ್ಲಿ ಎಂದೂ ಕಾಣದ ಗಾಂಭೀರ್ಯ . ವೇದಿಕೆಗೆ ಬಂಧು ತಮ್ಮ ಮಾತನ್ನು ಪ್ರಾರಂಭಿಸಿದರು .
 “ ಪ್ರೀತಿಯ ಮಕ್ಕಳೆಲ್ಲರಿಗೂ ಶುಭದಿನ . ನೀವು ನಮ್ಮನ್ನು ಬಿಟ್ಟು ಹೋಗುತ್ತಿದ್ದೀರಿ ಎಂಬ ನೋವಿಗಿಂತ , ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಒಂದು ಹೆಜ್ಜೆ ಮುಂದಿಡುತ್ತಿದ್ದೀರಿ ಎಂಬ ಖುಷಿಯಿದೆ . ಎಷ್ಟೋ ಮಂದಿ ದೊಡ್ಡ ಕನಸುಗಳನ್ನು ಹೊತ್ತಿದ್ದೀರಿ . ಎಲ್ಲವೂ ಈಡೇರಲಿ ಎಂದು ನಾನು ಹಾರೈಸುತ್ತೇನೆ . ಮುಂದೊಂದು ದಿನ ಇವರು ನನ್ನ ಶಿಷ್ಯರು ಎಂದು ನಾನು ಎಲ್ಲರೆದುರು ಹೆಮ್ಮೆಯಿಂದ ಹೇಳುವ ಹಾಗೆ ನೀವೆಲ್ಲ ಗೌರವಯುತವಾಗಿ ಬಾಳಿರಿ , ಈ ದಿನ ನಾನು ನಿಮಗೆಲ್ಲ ಒಂದು ಕಥೆ ಹೇಳಬೇಕೆಂದು ಸಿದ್ಧನಾಗಿ ಬಂದಿದ್ದೇನೆ . ಪ್ರತಿ ದಿನವೂ ಪಾಠ , ಈ ದಿನವೂ ಬೇಕಾ ಎಂದು ಭಾವಿಸಬೇಡಿ . 
ಶೇಷಾಚಲವೆಂಬ ಒಂದು ಸಣ್ಣ ಹಳ್ಳಿ . ಅಲ್ಲಿ ಒಂದು ಶಾಲೆ , ಸುಮಾರು ಮೂವತ್ತು ವಿದ್ಯಾರ್ಥಿಗಳು . ಆಗೆಲ್ಲ ಶಾಲೆಗೆ ಬರುವ ಮಕ್ಕಳ ಸಂಖ್ಯೆ ವಿರಳ . ಅದರಲ್ಲೂ ಹಣ್ಣುಮಕ್ಕಳಿಗಂತೂ ಶಾಲೆ ಹೇಗಿರುತ್ತದೆಂದೇ ಗೊತ್ತಿರಲಿಲ್ಲ . ಇಡೀ ಶಾಲೆಗೆ ಒಬ್ಬರೇ ಶಿಕ್ಷಕ , ಶ್ಯಾಮಸುಂದರ ಎಂದು ಅವರ ಹೆಸರು . ಕೇವಲ ಐದನೇ ವರ್ಗದವರೆಗಿನ ಶಿಕ್ಷಣ ಸೌಲಭ್ಯವಿದ್ದ ಶಾಲೆಯಲ್ಲಿ , ಅದೂ ಕೇವಲ ಮೂವತ್ತು ಮಕ್ಕಳಿಗೆ ಪಾಠ ಮಾಡಲು ಒಬ್ಬ ಶಿಕ್ಷಕ ಸಾಕು . 
ಶ್ಯಾಮಸುಂದರರ ಪತ್ನಿ ಅನ್ನಪೂರ್ಣ , ಸಾಕ್ಷಾತ್ ಅನ್ನಪೂರ್ಣೆಯೇ ! ಇನ್ನೊಬ್ಬರಿಗೆ ಕೈಲಾದಷ್ಟು ಸಹಾಯ ಮಾಡುವುದು ಇಬ್ಬರ ಮನೋಭಾವ , ಅವರ ಮದುವೆಯಾಗಿ ಎಂಟು ವರ್ಷಗಳಾಗಿತ್ತು . ಮೂವರು ಗಂಡು ಮಕ್ಕಳು . ಸುಖೀಸಂಸಾರ ! ಶ್ಯಾಮಸುಂದರರಿಗೆ ಶಾಲೆಯೇ ಎಲ್ಲ.  ವಿದ್ಯಾರ್ಥಿಗಳೆಲ್ಲ ಸ್ವಂತಮಕ್ಕಳಿಗಿಂತ ಹೆಚ್ಚು . ತಾವು ಕಷ್ಟದಲ್ಲಿದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಸಂಬಳವನ್ನೆಲ್ಲ ಖರ್ಚು ಮಾಡುತ್ತಿದ್ದರು . ಹೆಣ್ಣುಮಕ್ಕಳಿಗೂ ವಿದ್ಯೆ ಕೊಡಿಸಬೇಕೆಂದು ಹಣವನ್ನೆಲ್ಲ ಖರ್ಚು ಮಾಡುತ್ತಿದ್ದ ಶ್ಯಾಮಸುಂದರರಿಗೆ ಯಾರೊಬ್ಬರ ಬೆಂಬಲವೂ ಸಿಗಲಿಲ್ಲ . ಆದರೂ ಅವರ ಹೋರಾಟ ಮುಂದುವರಿಯುತ್ತಿತ್ತು . ತಮ್ಮ ಹೆಂಡತಿಗೂ ತಾವೇ ಅಕ್ಷರಾಭ್ಯಾಸ ಮಾಡಿಸಿದರು . ಕಲಿಯುವಾಗ ಅನ್ನಪೂರ್ಣಳಿಗೆ ಮನಸ್ಸಿಲ್ಲದಿದ್ದರೂ ತನ್ನ ಮಕ್ಕಳಿಗೆ ಹೇಳಿಕೊಡುವಾಗ , ವಿದ್ಯೆಯ ಮಹತ್ವದ ಅರಿವಾಯಿತು . ಇಷ್ಟೆಲ್ಲ ಆದರೂ ತಿಂಗಳ ಕೊನೆಯಲ್ಲಿ ಮಕ್ಕಳಿಗೆ ಗಂಜಿ , ಹೆತ್ತವರಿಗೆ ಮಡಿಕೆಯಲ್ಲಿನ ತಂಪಾದ ನೀರು ಹೊಟ್ಟೆ ತುಂಬಿಸುತ್ತಿದ್ದವು . ಗಣೇಶ ಹಬ್ಬಕ್ಕೆ ಗೌರೀಶನಿಗೆ ಬಟ್ಟೆ ತಂದರೆ , ದೀಪಾವಳಿಯಲ್ಲಿ ಮಹೇಶನಿಗೆ ಯುಗಾದಿಯಲ್ಲಿ ಸುರೇಶನಿಗೆ . ಆದರೆ ಶ್ಯಾಮಸುಂದರರ ಬಳಿಯಿದ್ದದ್ದು ಎರಡು ಪಂಚೆ , ಎರಡು ಅಂಗಿ , ಒಂದು ಜೊತೆ ಚಪ್ಪಲಿ. ಅನ್ನಪೂರ್ಣಮ್ಮಳ ಬಳಿ ಒಂದು ಮದುವೆ ಸೀರೆ , ಎರಡು ನಿತ್ಯದ ಸೀರೆಗಳಷ್ಟೇ . ಅಂತೂ ಹೇಗೋ ಅಲ್ಲಲ್ಲಿ ತೂರಾಡುತ್ತಾ , ತೂತು ಬಿದ್ದಲ್ಲಿ ತೇಪೆ  ಹಾಕುತ್ತ ಸಂಸಾರನೌಕೆ ಸಾಗುತ್ತಿತ್ತು . 
ಮಕ್ಕಳು ಶಾಲೆಗೆ ಹೋಗುವಷ್ಟು ದೊಡ್ಡವರಾದಾಗ , ಮೊಟ್ಟಮೊದಲ ಬಾರಿ ಅನ್ನಪೂರ್ಣ ಗಂಡನ ಬಳಿ ಗಟ್ಟಿಯಾಗಿ ಮಾತನಾಡಿದಳು. "ನಿಮಗಾಗಿ ಅಲ್ಲದಿದ್ದರೂ ನಿಮ್ಮ ಮಕ್ಕಳಿಗೋಸ್ಕರವಾದರೂ  ಸಂಬಳವನ್ನು ಉಳಿಸಿ , ಮೂರು ಜನರ ವಿದ್ಯಾಭ್ಯಾಸಕ್ಕೆ ಎಷ್ಟು ಖರ್ಚಾಗಬಹುದೆಂದು ನಿಮಗೆ ನಾನು ಹೇಳಬೇಕಿಲ್ಲ . ಬೇರೆ ಮಕ್ಕಳಿಗೆ ನೀವು ಸಹಾಯ ಮಾಡಿದರೆ ನಿಮ್ಮ ಮಕ್ಕಳ ಭವಿಷ್ಯವೇನು ? ಅವರಿಗೆ ಇನ್ಯಾರಿದ್ದಾರೆ ? ” 
 “ ಹೌದಲ್ಲವೇ  , ಮೂವರು ಬೆಳೆಯುವ ಹುಡುಗರು . ಓದು , ಬಟ್ಟೆ ಎಂದು ಖರ್ಚು ಇರುತ್ತದೆ . ನನಗೇಕೆ ಹೊಳೆಯಲಿಲ್ಲ , ಇರಲಿ ಅನ್ನಪೂರ್ಣ ನೀನು ಹೇಳಿದ್ದು ಒಳ್ಳೆಯದೇ ಆಯಿತು . ಇನ್ನು ಮುಂದೆ ಈ ನೂರು ರೂಪಾಯಿ ಸಂಬಳದಲ್ಲಿ ಅರ್ಧ ನನ್ನ ಮಕ್ಕಳಿಗೂ ಇನ್ನರ್ಧ ನಮ್ಮ ಮಕ್ಕಳಿಗೂ ಎತ್ತಿಡುತ್ತೇನೆ ” ಎಂದು ಹೇಳಿ ಹೊರನಡೆದರು . ನನ್ನ ಮಕ್ಕಳಿಗೂ - ನಮ್ಮ ಮಕ್ಕಳಿಗೂ ಇರುವ ವ್ಯತ್ಯಾಸ ಹತ್ತು ವರ್ಷ ಸಂಸಾರ ತೂಗಿಸಿದವಳಿಗೆ ಅರ್ಥವಾಗದೇ ಇರದು !
 ಹುಡುಗು ಬುದ್ಧಿಯ ಮಕ್ಕಳು , ಕಷ್ಟವೆಂದರೆ ಏನೆಂದು ಅರಿಯದ ವಯಸ್ಸು . ಇನ್ನೊಬ್ಬರ ಬಳಿಯಿರುವ ಬಟ್ಟೆ , ಆಟದ ವಸ್ತುಗಳು ತನಗೂ ಬೇಕೆನ್ನುವ ಮನಸ್ಸು , ಆ ಮಕ್ಕಳಿಗೆ ತಂದೆಯೆಂದರೆ ಏನೋ ಭಯ , ಗೌರವ . ಶಾಲೆಯಿಂದ ಬಂದ ನಂತರ ಪ್ರತಿದಿನ ಗೌರೀಶ , ಮಹೇಶನದ್ದು ಒಂದೇ ಮಾತು , ' ಅಮ್ಮಾ ಅವರ ಬಳಿ ಒಳ್ಳೆಯ ಬಟ್ಟೆ , ಚೀಲ , ಪುಸ್ತಕಗಳಿವೆ . ನಮ್ಮ ಬಳಿ ಏಕಿಲ್ಲ ? ಅಪ್ಪನೂ ದುಡಿಯುತ್ತಾರಲ್ಲಮ್ಮ , ನಮಗೂ ಕೊಡಿಸಬಹುದಲ್ಲ .... ' ಆ ತಾಯಿಗೆ ಮಾತೇ ಹೊರಡದು . ಇವರಿಬ್ಬರೋ  ಸರಿ , ಆದರೆ ಸುರೇಶ?     ಹಿರಿಯರಿಬ್ಬರ ಬಟ್ಟೆ  ಅವನಿಗೆ. ಅವನ ಪ್ರಶ್ನೆಗಳೆಷ್ಟಿರಬೇಡ... ಅಬ್ಬಬ್ಬಾ...!   ಆದರೆ ಅಮ್ಮನ ಬಾಡಿದ ಮುಖ ಅವನ ಪ್ರಶ್ನೆಗಳಿಗೆ ಕಡಿವಾಣ ಹಾಕುತ್ತಿತ್ತು . ಅವಳಾದರೂ ಏನು ಮಾಡಿಯಾಳು.ತನ್ನ ಮಾತನ್ನು ಗಂಡ ಕೇಳುವುದಿಲ್ಲ ಎಂದು ಗೊತ್ತು. ಅವರೇನು ಬದಲಾಗಿರಲಿಲ್ಲ.  ಅದೇ ಸಹಾಯ , ಅದೇ ಹೋರಾಟ .. ಮದುವೆಯಾದಾಗಿನಿಂದ ನೋಡುತ್ತಿರುವ ಅದೇ ವ್ಯಕ್ತಿತ್ವ..!
 ಗೌರೀಶ ಐದನೇ ತರಗತಿ ಮುಗಿಸಿ, ಪಕ್ಕದೂರಿನ  ಪ್ರೌಢಶಾಲೆಗೆ ನಾಲ್ಕು ಕಿಲೋಮೀಟರ್ ನಡೆಯುತ್ತಿದ್ದ;  ಎರಡು ವರ್ಷಗಳ ನಂತರ ಮಹೇಶ , ಮತ್ತೆ ಮೂರು ವರ್ಷಗಳ ಸುರೇಶ ಅದೇ ದಾರಿ ಹಿಡಿದರು. ಅಷ್ಟರಲ್ಲಿ ಶ್ಯಾಮಸುಂದರರ ಕೂದಲು ನೆರೆದಿತ್ತು . ಗೌರೀಶನ ಪ್ರೌಢಶಾಲೆ ಮುಗಿದಿತ್ತು . 
ಒಳ್ಳೆಯ ಅಂಕಗಳೂ ಬಂದಿದ್ದವು. ಅವನಿಗೆ ವಿಜ್ಞಾನಿಯಾಗಬೇಕೆಂಬ ಹಂಬಲವಿತ್ತು . ಆದರೆ ಮುಂದಿನ ವಿದ್ಯೆ ಬೆಂಗಳೂರಿನಲ್ಲಿ ಮಾತ್ರ ಸಾಧ್ಯ . ಬೆಂಗಳೂರು ಎಂದರೆ ಖರ್ಚಿಗೆ ಇನ್ನೊಂದು ಹೆಸರು . ಏನೇ ಆದರೂ ವಿದ್ಯೆ ಬೇಕಲ್ಲವೆ ? ಮಗನ ಆಸೆ ಈಡೇರಿಸಲಾಗದಿದ್ದರೆ ತಂದೆಯಾಗಿದ್ದಾದರೂ ಯಾವ ಸಂಭ್ರಮಕ್ಕೆ ? ... " ಸರಿಯಪ್ಪ , ನಿನ್ನ ಓದಿಗೆ ನೀನು ಸಿದ್ಧನಾಗು , ಹಣದ ಬಗ್ಗೆ ಏನೂ ಚಿಂತಿಸಬೇಡ , ನಾನಿದ್ದೇನೆ . ”  ಎಲ್ಲ ತಂದೆಯರೂ ತಮ್ಮ ಮಕ್ಕಳಿಗೆ ನೀಡುವ ಭರವಸೆಯಿದು . ನನ್ನ ಜೊತೆ ಅಪ್ಪನಿದ್ದಾನೆ ಎಂಬುದು ಮಕ್ಕಳ ಧೈರ್ಯ ಕೂಡ.  ಆದರೆ ಅನ್ನಪೂರ್ಣಳ ಮನದಲ್ಲಿರುವ ಪ್ರಶ್ನೆಗೆ ಉತ್ತರಿಸುವವರಾರು ? ಇನ್ನೊಬ್ಬರಿಂದ ಬಿಡಿಗಾಸನ್ನೂ ಪಡೆಯದ ಈ ಸ್ವಾಭಿಮಾನಿಗೆ ಇಂತಹ ಭರವಸೆ ನೀಡುವ ಧೈರ್ಯವಾದರೂ ಎಲ್ಲಿಂದ ಬಂತು ? ಇನ್ನೂ ಇಬ್ಬರು ಮಕ್ಕಳಿದ್ದಾರೆ . ಅವರೂ ಓದಬೇಡವೇ .... ಅವರಿಗೂ ಹಣ ಬೇಕು . ಹಾಗೆಂದು ಗೌರೀಶನ ಕನಸುಗಳಿಗೆ ಕೊಳ್ಳಿಯಿಡುವುದು ಸರಿಯಲ್ಲ . ಇವರೇನು ಮಾಡುತ್ತಾರೆ ? ಅಷ್ಟರಲ್ಲಿ ಶ್ಯಾಮಸುಂದರರ ಕೈಯಲ್ಲಿ ಪತ್ರಗಳಿದ್ದವು . ಎಷ್ಟೋ ವರ್ಷಗಳಿಂದ ಪೆಟ್ಟಿಗೆಯ ಮೂಲೆಯಲ್ಲಿದ್ದ ಮನೆಪತ್ರ ಬೆಳಕು ಕಂಡವು . 
 “ ನಿಮ್ಮ ಬಂದ ಒಂದು ತಂದೆಯವರಿಂದ ಮನೆಯನ್ನೂ ಮಾರಲು ಸಿದ್ಧರಿರುವಿರಾ ? ” 
“ ನನ್ನ ನಂತರ ಮಗನಿಗೇ ತಾನೇ ? ” 
“ ಮತ್ತೆ ಮಹೇಶ , ಸುರೇಶ ? ” 
“ ನಾನು ನೀನು ಇದ್ದೇವಲ್ಲ ... ?"
“ ಆದರೂ ಆಮೇಲೆ ಉಳಿಯುವುದೆಲ್ಲಿ ? " "ಚಿಂತಿಸಬೇಡ , ದೇವರಿದ್ದಾನೆ. ಅವನೆಲ್ಲ ನೋಡಿಕೊಳ್ಳುತ್ತಾನೆ . ”
 ಮಗ ಬೆಂಗಳೂರಿನ ಹಾದಿ ಹಿಡಿದದ್ದಾಯಿತು . ಹೋದವನು ಆರು ತಿಂಗಳಿಗೊಮ್ಮೆ ಬರುತ್ತಿದ್ದ ; ನಂತರ ಅದೂ ಇಲ್ಲ . ಆದರೆ ಅವರ ತಂದೆ ಮಾತ್ರ ಪ್ರತಿತಿಂಗಳೂ ಹಣ ಹೊಂದಿಸಿ ಕಳುಹಿಸುತ್ತಿದ್ದರು . ಆನಂತರ ಮಹೇಶ ಬೆಂಗಳೂರಿಗೆ ಹೊರಟು ನಿಂತಾಗ ಸೈಕಲ್ , ದನ ಕರುಗಳು ಮನೆ ಬಿಟ್ಟವು . 
ಖರ್ಚು ಹೆಚ್ಚಾಯಿತು , ಸಂಪಾದನೆ ಹೆಚ್ಚಾಗಲಿಲ್ಲ . ಹೇಗೋ ಸುರೇಶ ಸಮಯ ಸಿಕ್ಕಿದಾಗಲೆಲ್ಲ ಮನೆಗೆಲಸ ಮಾಡಿ , ಶಾಲೆಗೆ ಹೋಗುತ್ತಿದ್ದ . ಮತ್ತೆರಡು ವರ್ಷಗಳೂ ಚಕ್ರದಂತೆ ಕಳೆದವು , ಅನ್ನಪೂರ್ಣೆಯೂ ಮುಪ್ಪಾದಳು . ಮತ್ತೆ ಅದೇ ಹಾಡು , ಅದೇ ತಾಳ , ಮೂರನೆಯವನೂ ಬೆಂಗಳೂರಿನ ಹಾದಿ ಸವೆಸುವವನೇ ! 
ಈ ಬಾರಿ ಚಿಂತೆಯಾಗಿದ್ದು ಶಾಮ್ಯಸುಂದರರಿಗೆ ಹಣಕ್ಕೇನು ಮಾಡುವುದು ?
 ಅವರ ಕಳವಳ ಮುಖದಲ್ಲಿಯೇ ಗೋಚರವಾಗಿತ್ತು . ಅನ್ನಪೂರ್ಣ ನಗುತ್ತಲೇ ಕತ್ತಿನಿಂದ ಮಾಂಗಲ್ಯಸರ ತೆಗೆದರು . 
“ ನಿನ್ನ ತಂದೆಯವರು ಕೊಟ್ಟಿದ್ದು ಇದು .... ಬೇಡ ಅನ್ನಪೂರ್ಣ . "
“ ಸುಮ್ಮನಿರಿ ನೀವು . ಹಣ ಹೊಂದಿಸಲು ಇನ್ನೇನೂ ಉಳಿದಿಲ್ಲ." 
“ ಆದರೂ .." 
 “ ತೆಗೆದುಕೊಳ್ಳಿ ಇದನ್ನು."
 ಶ್ಯಾಮಸುಂದರರು ಮಾತನಾಡಲಿಲ್ಲ . ಆದರೆ ಕಣ್ಣುಗಳು ಒದ್ದೆಯಾಗಿದ್ದವು . ಮೊದಲ ಗಂಡನ ಅಸಹಾಯಸ್ಥಿತಿಯನ್ನು ನೋಡಿ , ಸೆರಗಂಚಲ್ಲಿ ಕಣ್ಣೊರೆಸಿಕೊಂಡರು ಅನ್ನಪೂರ್ಣಮ್ಮ.  ತುಟಿಯಂಚಲ್ಲಿ ನಗು ಬೀರಿದರು . ನಗುವಲ್ಲಿನ ನೋವು , ಶ್ಯಾಮಸುಂದರರನ್ನು ಹಿಂಡಿತು . ಈ ಇಪ್ಪತ್ತೈದು ವರ್ಷದಲ್ಲಿ ಒಂದು ಜೊತೆ ಬಳೆಯನ್ನೂ ತಂದುಕೊಡಲಾಗದವನ ಜತೆ ಸಂಸಾರ ನಡೆಸಿದವಳ ಮಾಂಗಲ್ಯಸರವನ್ನೂ ಉಳಿಸಿಕೊಳ್ಳಲಾಗದ ದುರ್ಗತಿ. "ನೀವೇಕೆ ಹಿಂಸೆ ಪಡುತ್ತಿದ್ದೀರಿ ? ಸರ ಹೋದರೇನಾಯಿತು ? ಚಿನ್ನದಂತಹ ಪತಿ , ರತ್ನದಂತಹ ಮೂವರು ಮಕ್ಕಳಿದ್ದಾರೆ . ಕಷ್ಟಕ್ಕಾಗದಿದ್ದರೆ ಬಂಗಾರಕ್ಕೂ ಬೆಲೆ ಇಲ್ಲ , ನೋಡುತ್ತಿರಿ , ಮುಂದೆ ನಿಮ್ಮನ್ನು ಮಹಾರಾಜರಂತೆ ನೋಡಿಕೊಳ್ಳುತ್ತಾರೆ . ನಮ್ಮ ಮನೆ , ಮಾಂಗಲ್ಯಸರ ಎಲ್ಲವೂ ಮತ್ತೆ ನಮ್ಮ ಕೈ ಸೇರುವಂತೆ ಮಾಡುತ್ತಾರೆ . ಈಗ ನಮ್ಮ ಕೈಲಾದಷ್ಟು ನಾವು ಸಹಾಯ ಮಾಡೋಣ . ಮುಂದಿನದು ಶಿವನಿಚ್ಛೆ ! " 
ಇಷ್ಟೊಂದು ಆತ್ಮಸ್ಥೈರ್ಯವುಳ್ಳವಳು , ಜೀವನದ ಮೇಲೆ ಭರವಸೆಯುಳ್ಳವಳು , ಪತ್ನಿಯಾಗಿದ್ದಕ್ಕೆ ಖುಷಿ ಪಡಬೇಕೋ , ಅವಳ ಕಣ್ಣೀರಿಗೆ ಸಾಂತ್ವನ ಹೇಳಲಾರದ ಸ್ಥಿತಿಯಲ್ಲಿದ್ದಿದ್ದಕ್ಕೆ ತನ್ನನ್ನು ತಾನು ಜರಿದುಕೊಳ್ಳಬೇಕೋ ಎಂದುಕೊಂಡರು ಶ್ಯಾಮಸುಂದರರು. ಅದೆಂತಹ  ನಂಬಿಕೆ ಅವಳಿಗೆ ! ಗೌರೀಶನ ಮುಖ ನೋಡದೇ ಸರಿ ಸುಮಾರು  ಮೂರುವರ್ಷಗಳೇ ಕಳೆದವು . ಮಹೇಶ ಪತ್ರಕ್ಕೆ ಉತ್ತರ ಬರೆಯುತ್ತಿಲ್ಲ . ಇನ್ನು ಈ ಸುರೇಶನ ಕಥೆ ಏನೋ ... ಹೋದವರು ಹೊರಟೇ ಹೋದರು . ಅವಳೆಂದಂತೆ ನನ್ನನ್ನು ಮಹಾರಾಜನಾಗಿ ನೋಡಿಕೊಳ್ಳದಿದ್ದರೂ ಪರವಾಗಿಲ್ಲ . ಈ ಮಕ್ಕಳಿಂದ, ನನ್ನಂತಹ ಗಂಡನಿಂದ ಭಿಕ್ಷುಕಿಯಾಗದಿದ್ದರೆ ಸಾಕು ದೇವರೇ ! 
ಇದ್ದ ಒಂದು ಮನೆ ಹೋಯಿತು. ಮೂರುಮಕ್ಕಳೂ ಹೊರನಡೆದರು . ನಗು ಎಂಬುದು ಮಾಯವಾಗಿ ಎಷ್ಟೋ ಕಾಲವಾಗಿತ್ತು . ಮಕ್ಕಳಿಗೆ ಮನೆಪಾಠ ಹೇಳಿಕೊಡುವುದರಿಂದ ಬರುವ ಆದಾಯ  ಒಂದೇ ಸಂಸಾರ ನಡೆಸಲು ದಾರಿ . ಇತ್ತೀಚೆಗೆ ಅನ್ನಪೂರ್ಣಮ್ಮಳ ಮುಂಚಿನ ಧೈರ್ಯ ಮಾಯವಾಗಿತ್ತು . ಆರೋಗ್ಯ ಹದಗೆಟ್ಟಿತ್ತು . ಮಕ್ಕಳನ್ನು ಕೊನೆಯ ಬಾರಿ ನೋಡಬೇಕೆಂಬ ಹಂಬಲ ಹೆಚ್ಚಾಗಿತ್ತು . ಶ್ಯಾಮಸುಂದರರೂ ಪತ್ರ ಬರೆದರು . ಟಪಾಲಿಗೆ ಹಣ ಖರ್ಚಾಯಿತೇ ಹೊರತಾಗಿ ಮಕ್ಕಳಾರೂ ಬರಲಿಲ್ಲ . ದಿನೇದಿನೇ ಆರೋಗ್ಯ ಹದಗೆಡುತ್ತಿತ್ತು . 
ಒಂದು ದಿನ ಗೌರೀಶನ ಪತ್ರ ಬಂತು . “ ಅಪ್ಪ ನನಗೆ ಬರಲು ಸಾಧ್ಯವಿಲ್ಲ . ಆಸ್ಟ್ರೇಲಿಯಾಗೆ ಹೋಗುವ ತಯಾರಿಯಲ್ಲಿದ್ದೇನೆ . ಅಮ್ಮನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸಿ. ಹೊರದೇಶಕ್ಕೆ ಹೋಗಬೇಕಾಗಿರುವುದರಿಂದ ಹಣದ ಅನಿವಾರ್ಯತೆಯಿದೆ . ಇಲ್ಲದಿದ್ದರೆ ಖಂಡಿತ  ಹಣ ಕಳುಹಿಸುತ್ತಿದ್ದೆ . ” 
ಅಯ್ಯೋ ದೇವರೆ , ಇವನ ಬಳಿ ಹಣ ಕೇಳಿದವರಾರು ? ಬಂದುಹೋಗು ಎಂದಷ್ಟೇ ಹೇಳಿದ್ದು .ಮಹೇಶನ ಚಕ್ರದಲ್ಲಿ ರಜದಿಲ್ಲ ಎಂದಿದೆ , ಸುರೇಶ ಪರೀಕ್ಷೆ ಎಂದು ಬರೆದಿದ್ದಾನೆ . ಒಬ್ಬರಿಗೂ ಕಾಯಿ ಬೇಡವೇ ? ತಮ್ಮದೇ ಲೋಕದಲ್ಲಿ ಶ್ಯಾಮಸುಂದರಳು ಮುಳುಗಿದ್ದರು.
ಗಂಡನ ಮುಖ ನೋಡಿಯ ತಿಳಿಯಿತು ಪತ್ನಿಗೆ. ಹೃದಯದಲ್ಲಿ ತೊಂದರೆಯಿದೆ ಎಂದು ತಿಳಿದರೂ ಸಹ , ಚಿಕಿತ್ಸೆಗೆ ಹಣವಿಲ್ಲ. ಬಂದು ಮಾತನಾಡಿಸಲು ಮಕ್ಕಳಿಗೂ ಬಿಡುವಿಲ್ಲ , " ಅನ್ನಪೂರ್ಣ , ಅವರಿಗೆ ಏನೇನೋ ಕೆಲಸವಂತೆ , ಪತ್ರದಲ್ಲಿ ಬರೆದಿದ್ದಾರೆ , ಅಲ್ಲಿಯೇ ಚಿಕಿತ್ಸೆ ಮಾಡಿಸೋಣ . " ಆಯಿತೆಂದು ಇಬ್ಬರೂ ಬೆಂಗಳೂರಿಗೆ ಬಂದರು , ಒಂದು ದೊಡ್ಡಾಸ್ಪತ್ರೆ ಏನೇ ಖಾಯಿಲೆಯಿದ್ದರೂ , ಎಲ್ಲದಕ್ಕೂ ಚಿಕಿತ್ಸೆಯಿದೆ . ಆದರೆ ಹಣ ಬೇಕಲ್ಲ , ಅನ್ನಪೂರ್ಣಮ್ಮನವರಿಗೆ ಶಸ್ತ್ರಚಿಕಿತ್ಸೆ ಆಯಿತು . ಆದರೆ ಶ್ಯಾಮಸುಂದರರಿಗೆ ಚಿಂತೆ . ಎರಡು ಲಕ್ಷ ! ಎಲ್ಲಿಂದ ನೀಡಲಿ ? ಜೇಬಿನಲ್ಲಿರುವುದು ಕೇವಲ ಮುನ್ನೂರು ರೂಪಾಯಿ .... ಕಣ್ಣು ಮುಚ್ಚಿಕೊಂಡು ಕುರ್ಚಿಗೆ ಒರಗಿ ಕುಳಿತರು . ಅಷ್ಟರಲ್ಲಿ ಯಾರೋ ತಟ್ಟಿಸಿ ಎಬ್ಬಿಸಿದಂತಾಯಿತು .
 “ ಸರ್ , ನಿಮ್ಮ ಕಡೆಯ ಪೇಷೆಂಟ್ನ ನೀವು ನೋಡಬಹುದು . " 
“ ಅಯ್ಯೋ ಎಲ್ಲ ಚಿಕಿತ್ಸೆ ಮುಗಿಯಿತಾ .... ? ನಾನಿನ್ನು ದುಡ್ಡು ಕೊಟ್ಟಿಲ್ಲ . "
“ Sir , ಹಣ ಕಟ್ಟದೇ ಇದ್ದಿದ್ದರೆ , ಇವರ ಟ್ರೀಟ್ಮೆಂಟ್ ಆಗ್ತಿರಲಿಲ್ಲ . ”
 “ ಹಾಗಾದರೆ ಯಾರು ಕೊಟ್ಟರು ? ” 
“ ಅದನ್ನು ನೀವು Counter ನಲ್ಲಿ ವಿಚಾರಿಸಿ . ” ಶ್ಯಾಮಸುಂದರರು ಆಶ್ಚರ್ಯದಿಂದ ಓಡಿ ಬಂದರು .
 “ ನನ್ನ ಹೆಂಡತಿ , ಅನ್ನಪೂರ್ಣ ಅಂತ . ಅವಳಿಗೆ ಹೃದಯ ಶಸ್ತ್ರಚಿಕಿತ್ಸೆ ಆಯಿತು . ಹಣ ನೀಡಿದ ದಾನಿ ಯಾರೆಂದು ತಿಳಿದುಕೊಳ್ಳಬಹುದೆ ? ”
 " Sir . ಅವರು ನಮ್ಮ ಆಸ್ಪತ್ರೆಯ ಡಾಕ್ಟರ್ ಮುರಳೀಧರನ್ . " 
ಈ ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲ . ಅವರನ್ನು ಮಾತನಾಡಿಸೋಣ . ಒಳಬರುತ್ತಿದ್ದಂತೆ ಆ ವೈದ್ಯನೇ ಕಾಲಿಗೆರಗಿದ , ಆತ ಅವರ ಹಳೆಯ ಶಿಷ್ಯ . ಅವರ ಮನೆಯಲ್ಲಿ ಊಟ ಮಾಡಿ , ಮೂವರು ಮಕ್ಕಳೊಡನೆ ಆಡಿ ಬೆಳೆದಿದ್ದ . ತನ್ನ ಗುರುಗಳನ್ನು ನೋಡಿ ಖಷಿಯಾದರೂ , ಅವರ ಪರಿಸ್ಥಿತಿಯನ್ನು ನೋಡಿ ದುಃಖವಾಗಿತ್ತು . ಹಣಕ್ಕಾಗಿ ಪರದಾಡುವುದನ್ನು ನೋಡಿದ ಈತ , ತಾನೇ ಹಣ ತುಂಬಿ ಶಸ್ತ್ರ ಚಿಕಿತ್ಸೆ  ಮಾಡಿಸಿದ್ದ . ಶ್ಯಾಮಸುಂದರರ ಕಣ್ಣಾಲಿಗಳು ತುಂಬಿದ್ದವು.  ನಿಜವಾಗಿಯೂ ಮುರಳೀಧರನ್ ಶಿಷ್ಯನಾಗದೇ ದೇವರಾಗಿ ಕಂಡಿದ್ದ .
 “ ಗುರುಗಳೇ , ನೀವು ಈ ರೀತಿ ನಿಂತುಕೊಂಡರೆ ನನಗೆ ಮುಜುಗರವಾಗುತ್ತದೆ . ನಿಮ್ಮಿಂದಲೇ ನಾನು ಇಷ್ಟು ಬೆಳೆದಿದ್ದು , ನಿಮ್ಮ ಋಣ ತೀರಿಸಲು ಇದೊಂದು ಅಲ್ಪ ಮಾರ್ಗ , ಇನ್ನೇನು ತೊಂದರೆ ಆದರೂ ನನ್ನನ್ನು ನೆನಪಿಸಿಕೊಳ್ಳಿ , ತಕ್ಷಣ ಬರುತ್ತೇನೆ . ” 
ಜಗತ್ತಿನಲ್ಲಿ ಇನ್ನೂ ಮಾನವೀಯತೆ ಬದುಕಿದೆ ಎಂದು ಶ್ಯಾಮಸುಂದರರಿಗೆ ಖಚಿತವಾಯಿತು . ಅಂತೂ ಹೆಂಡತಿ ಗುಣವಾದಳು ಎಂದು ಖುಷಿಯಿಂದ ಊರಿಗೆ ಬಂದರು. ಆದರೆ ಆ ಖುಷಿಯನ್ನೂ ದೇವರು ಹೆಚ್ಚು ದಿನ ನೀಡಲಿಲ್ಲ . ಎರಡೇ ತಿಂಗಳಿಗೆ ಆ ಪುಟ್ಟಹೃದಯ ತನ್ನ ಕೆಲಸವನ್ನು ನಿಲ್ಲಿಸಿತ್ತು . ಈಗ , ಶ್ಯಾಮಸುಂದರರು ಒಂಟಿ . ಇಷ್ಟು ದಿನ ನೋವಿಗೆ ಹೆಗಲಾಗಿ ಇದ್ದವಳು ಒಮ್ಮೆಲೇ ಮರೆಯಾಗಿದ್ದಕ್ಕೋ ಏನೋ ಮನವೆಲ್ಲ ಭಾರ ... ಊರವರೆಲ್ಲ ಮಕ್ಕಳನ್ನು ಬರಹೇಳಿ ಎಂದರು . ಆದರೆ ಶ್ಯಾಮಸುಂದರರ ಮನಸ್ಸು ಸತ್ಯ ಹೇಳುತ್ತಿತ್ತು . ಬೇಡ , ಅವರು ಬರುತ್ತಾರೆಂಬ ನಂಬಿಕೆ ಕಿಂಚಿತ್ತಾದರೂ ಇದೆಯೇ ? ಖಂಡಿತ ಇಲ್ಲ . ಬದುಕಿದ್ದಾಗಲೇ ನೂರೆಂಟು ಕಾರಣ ಹೇಳಿ ಬರದವರು , ಈಗ ಬರುತ್ತಾರೆಯೇ ? ಕೊನೆಗೂ ಊರವರೇ ಪತ್ರ ಬರೆದರು . ಶ್ಯಾಮಸುಂದರರು ಅಂತ್ಯಕ್ರಿಯೆ ಮಾಡಿ , ಆಕಾಶ ನೋಡುತ್ತ ಕುಳಿತರು . ಹತ್ತು ದಿನಗಳಾದರೂ , ಮಕ್ಕಳಿರಲಿ , ಪತ್ರದ ಸುಳಿವೂ ಇರಲಿಲ್ಲ .
 ಗಾಯಕ್ಕೆ ಬಿಸಿತುಪ್ಪ ಸವರಿದಂತಿತ್ತು ಪರಿಸ್ಥಿತಿ . ಕಿತ್ತು ತಿನ್ನುವ ಬಡತನ . ಈಗಂತೂ ಅನ್ನ ಬೇಯಿಸಿ ಕೊಡಲೂ ಯಾರೂ ಗತಿಯಿಲ್ಲ , ನೆನಪಾದಾಗ ಊಟ , ನಿದ್ದೆ , ತುಂಬ ಕೃಶರಾಗಿದ್ದರು . ಊರವರ ಸಮಾಧಾನದ ಮಾತುಗಳು ಸಹ ಈಟಿಯಂತೆ ಇರಿಯುತ್ತಿದ್ದವು .
 “ ರಾಯರೇ , ತಾಯಿ ಕ್ರಿಯೆ ಮಾಡೋಕಾದ್ರು ಬರಬೇಡವೇ ಮಕ್ಕಳು ? "
 “ ಹಿರಿಯ ಮಗ ಮದುವೆ ಆದನಂತಲ್ಲ .... ನಿಮಗೆ ಗೊತ್ತಿಲ್ವಾ ? ”
"ಊರ ಮಕ್ಕಳಿಗೆ ಪಾಠ ಮಾಡೋ ನಿಮಗೆ ಹೀಗಾಗಬಾರದಿತ್ತು . " 
ಈ ಮಾತಿಗೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಅಂದೇ ತಿಳಿದರು ಶ್ಯಾಮಸುಂದರರು . ಅಂದಿನಿಂದ ಅವರ ಮಾತೇ ನಿಂತುಹೋಗಿತ್ತು . ಸುಮಾರು ವರ್ಷಗಳಾದವು , ಎಲ್ಲರಿಗೂ ಅವರು ಮಾತನಾಡುತ್ತಾರೆ ಎಂಬುದೇ ಮರೆತುಹೋಗಿತ್ತು . ಸ್ವತಃ ಅವರಿಗೆ ಕೂಡ ! ಎಂಟು ವರ್ಷಗಳಿಂದೀಚೆಗೆ ಮಕ್ಕಳ ಪತ್ರವೂ ಬಂದಿರಲಿಲ್ಲ,  ಅವರೆಲ್ಲಿದ್ದಾರೆಂದು ತಿಳಿದಿರಲಿಲ್ಲ . 
ಈ ಮಧ್ಯೆ ಅವರ ಹಳೆ ಶಿಷ್ಯರು ಊರಿಗೆ ಬಂದಾಗಲೆಲ್ಲ , ಅವರ ಭೇಟಿ ಮಾಡಿ ಮಾತನಾಡಿಸಲು ಪ್ರಯತ್ನಿಸುತ್ತಿದ್ದರು . ಅವರೆಲ್ಲ ಸೇರಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು . ಶ್ಯಾಮಸುಂದರರ ಶಿಕ್ಷಣಪ್ರೀತಿ , ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಕುರಿತು ಪತ್ರ ಬರೆದರು . ಇವರೆಲ್ಲರ ಪರಿಶ್ರಮದಿಂದಾಗಿ ರಾಜ್ಯ ಸರಕಾರ ಪ್ರಶಸ್ತಿ ನೀಡಿತು . ಅದರಿಂದ ಬಂದ ಹಣದಿಂದಲಾದರೂ ಗುರುಗಳ ಬಡತನ ದೂರವಾಗಲಿ ಎಂಬುದು ಶಿಷ್ಯರ ಆಸೆಯಾಗಿತ್ತು . ಆದರೆ ಶ್ಯಾಮಸುಂದರರು ಮತ್ತೆ ಆ ಎಲ್ಲ ಹಣವನ್ನೂ ತಮ್ಮೂರಿನ ಶಾಲೆಗೆ ನೀಡಿದರು . ಪ್ರಶಸ್ತಿ ಬಂಧ ಖುಷಿ,  ಮತ್ತೆ ಅವರು ಶಾಲೆಗೆ ದಾನ ಮಾಡಿದ ವಿಷಯವನ್ನು ಒಂದು ಲೇಖನವಾಗಿ ಸಿದ್ಧಪಡಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರು . ಒಂದು ಸಮಾರಂಭ ಏರ್ಪಡಿಸುವ ಸಲುವಾಗಿ ಹಳೆಯ ಶಿಷ್ಯರನ್ನು ಒಟ್ಟುಗೂಡಿಸೋಣ ಎಂದು ಅಂತರ್ಜಾಲದಲ್ಲೂ ವಿಷಯವನ್ನು ಬಿತ್ತರಿಸಲಾಯಿತು . ಇದೆಲ್ಲದರ ಪರಿಣಾಮವಾಗಿ ಆಸ್ಟ್ರೇಲಿಯಾದಲ್ಲಿದ್ದ ಗೌರೀಶನಿಗೂ , ಅಮೆರಿಕದಲ್ಲಿದ್ದ ಮಹೇಶನಿಗೂ , ದುಬೈನಲ್ಲಿದ್ದ ಸುರೇಶನಿಗೂ ಸುದ್ದಿ ತಲಪಿತು . ಅವರೆಲ್ಲ ತಮ್ಮ ಹೆಂಡತಿ ಮಕ್ಕಳಿಗೆ ತಂದೆಯ ಚಿತ್ರ ತೋರಿಸಿ ವಿಷಯ ಹೇಳಿದರು .
 " We are happy to hear the news . Congrats Dad " 
-ಎಂಬ ಎರಡು ವಾಕ್ಯಗಳನ್ನು facebook twitter ಗಳಲ್ಲಿ ಹಾಕಿದ್ದರು . ಅಷ್ಟೆ !! ನಮ್ಮ ಜನರು ಖುಷಿಯನ್ನಾಗಲೀ , ದುಃಖವನ್ನಾಗಲೀ , ಹಂಚಿಕೊಳ್ಳುವ ಪದ್ಧತಿ ಕೇವಲ ಮೊಬೈಲ್ ಮುಖಾಂತರವೇ ! 
ನೋಡಿ , ಇಲ್ಲಿ ಕುಳಿತಿರುವ ವೃದ್ಧರೇ ಶ್ಯಾಮಸುಂದರ . ಅವರ ಮನೆಯಲ್ಲಿ ಊಟ ಮಾಡಿ , ಅವರಿಂದ ಪಾಠ ಹೇಳಿಸಿಕೊಂಡ ಶಿಷ್ಯರಲ್ಲಿ ನಾನೂ ಒಬ್ಬ.  ಅಂದು ಅವರ ನಿಲವು , ಗತ್ತು ನೋಡಿದ ನನಗೆ ಇಂದು ಈ ಬಾಗಿದ ಶರೀರವನ್ನು ನೋಡಲು ಅಸಾಧ್ಯ. ಈ ದೇಹ ಜೀವನದುದ್ದಕ್ಕೂ ಅದೆಷ್ಟು ನೋವನ್ನುಂಡಿರಬಹುದು ... ಪ್ರತಿ ಆಘಾತವು ಇವರನ್ನು ಮೂಕರನ್ನಾಗಿ ಮಾಡಿತು , ನಮಗೆಲ್ಲ ದುಃಖವಾದ ವಿಷಯವೆಂದರೆ ಸಮಾರಂಭದ ದಿನ ಅವರ ಮಕ್ಕಳು ಬರುತ್ತಾರೆಂದುಕೊಂಡಿದ್ದೆವು . ಗುರುಗಳು ನಕ್ಕರು . ನಮ್ಮ ಉಚಿಕೆ ಸುಳ್ಳಾಯಿತು , ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ ಎಂದು ಗುರುಗಳಿಗೆ ತಿಳಿಸಿದೆವು . ಆಗಲೂ ನಕ್ಕರು . ಹಣವನ್ನು ದಾನ ಮಾಡಿ ಮತ್ತೆ ನಕ್ಕರು . ಅವರ ಪರಿಸ್ಥಿತಿ ಇವರಿಗೆ ನಗು ತರಿಸುತ್ತಿದೆ . ಆದರೆ ನಮಗೆ ಪಾಠವಾಗಬೇಕಿದೆ. 
ಹಕ್ಕಿ  ರೆಕ್ಕೆ ಬಲಿತ ಕೂಡಲೇ ಹಾರಿ ಹೋಗುವುದೆಂಬ ಪಾಠ  ನಿಮಗಿತ್ತು . ನೆನಪಿದೆಯೇ ? ಪಕ್ಷಿಗಳಿಗೂ ನಮಗೂ ಬಹಳ ವ್ಯತ್ಯಾಸವಿದೆ . ನಾವು ಬುದ್ಧಿಜೀವಿಗಳು . ನಮಗೆ ಭಾವನೆಗಳಿವೆ, ನಿರ್ಧಾರ ಮಾಡುವ ಸಾಮರ್ಥ್ಯವಿದೆ.  ಜೊತೆಯಲ್ಲಿ ಕರ್ತವ್ಯ , ಜವಾಬ್ದಾರಿಗಳೂ ಇರಬೇಕಲ್ಲವೇ ? ಕ್ರೂರಪ್ರಾಣಿಗಳ ಒಮ್ಮೊಮ್ಮೆ ಮಾನವೀಯತೆ ಮೆರೆಯುತ್ತವೆ . ಆದರೆ ನಮಗೆಲ್ಲಿದೆ ? ಅಕ್ಕ - ಪಕ್ಕದವರೊಡನೆ ಜಗಳ , ಚಾಡಿ ಮಾತು , ದೌರ್ಜನ್ಯ , ಲಂಚ , ಅರಾಜಕತೆ ಇವೆಲ್ಲ ಜೀವನದ ಭಾಗವಾಗಿವೆ .
 ನಿಮ್ಮಲ್ಲಿ ಎಷ್ಟೋ ಜನ ಪಟ್ಟಣಕ್ಕೆ ಹೋಗಿ , ದೊಡ್ಡ ಕೆಲಸ ಮಾಡಿ ಲಕ್ಷಾಂತರ ಸಂಪಾದಿಸುವ ಕನಸನ್ನು ಹೊತ್ತಿದ್ದೀರಿ . ಅವುಗಳಿಗೆ ನಿಮ್ಮ ತಂದೆ - ತಾಯಿ ಬೆನ್ನಲುಬಾಗಿರುತ್ತಾರೆ , ನಿಮ್ಮೆಲ್ಲರ ಕನಸುಗಳೂ ನನಸಾಗಲಿ ಎಂದು ನಾವೂ ಹಾರೈಸುತ್ತೇವೆ . ಆದರೆ ಶ್ಯಾಮಸುಂದರರ ಪರಿಸ್ಥಿತಿ ನಿಮ್ಮ ಹೆತ್ತವರಿಗೆ ಬರದಿರಲಿ , ನನ್ನ ಶಿಷ್ಯರು ಅಷ್ಟು ಕ್ರೂರಿಗಳಲ್ಲ ಎಂದು ನಾನು ನಂಬುತ್ತೇನೆ.
 ಸ್ವಾಮಿ ವಿವೇಕಾನಂದರು 'ಯುವಜನತೆ ಒಗ್ಗೂಡಿದರೆ ಇಡೀ ದೇಶವನ್ನೇ ಬದಲಾಯಿಸಬಹುದು ' ಎಂದು ಹೇಳಿದ್ದು ನೆನಪಿದೆಯೇ ? ಈ  ಸಂದರ್ಭ ಹೊಸ  ಸಮಾಜಕ್ಕೆ ನಾಂದಿಹಾಡಲಿ.  ಮೌಢ್ಯ  ಅಳಿಯಲಿ , ಪ್ರೀತಿ-ಮಾನವೀಯತೆಗೆ ಗೆಲುವಾಗಲಿ , ನೀವೆಲ್ಲರೂ ನನಗೊಂದು ಪ್ರತಿಜ್ಞೆ ಮಾಡಿ. "
ಎಲ್ಲ ಮಕ್ಕಳೂ ಎದ್ದು ನಿಂತರು . ಮೋಹನಸರ್ ಹೇಳಿಕೊಟ್ಟಂತೆ ಒಂದೇ ಧ್ವನಿಯಲ್ಲಿ ಪ್ರತಿಜ್ಞೆ ಮಾಡಿದರು “ ಯಾವುದೇ ಕಾರಣಕ್ಕೂ ನನ್ನ ಹೆತ್ತವರನ್ನು ನಾನು ತೊರೆಯುವುದಿಲ್ಲ . ಎಷ್ಟೇ ಓದಿರಲಿ , ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ , ಎಷ್ಟೇ ಸಂಪಾದನೆ ಮಾಡಲಿ , ನನ್ನ ತಂದೆ - ತಾಯಿಯರ ಕೊನೆಯ ಕ್ಷಣದವರೆಗೂ ನಾನು 
ಅವರನ್ನು ನೋಡಿಕೊಳ್ಳುತ್ತೇನೆ. "
ಇಡೀ ಸಭಾಂಗಣ ಈ ವಾಕ್ಯಗಳಿಂದ ಪ್ರತಿಧ್ವನಿಸಿತು. ಎಲ್ಲರ ಕಣ್ಣುಗಳೂ ಹನಿಗೂಡಿದ್ದವು. ಮೋಹನ್ ಸರ್ ಮುಂದುವರೆಸಿದರು - "ಮಗನಾಗಿರಲಿ, ಮಗಳಾಗಿರಲಿ -ಹೆತ್ತವರು, ಹೆತ್ತವರೇ. ಜವಾಬ್ದಾರಿ ಎಂದರೆ ಎಲ್ಲರಿಗೂ ಒಂದೇ. ನಿಮ್ಮ ಪ್ರೀತಿ ಕಾಳಜಿಯನ್ನಷ್ಟೇ ಅವರು ಬಯಸುವುದು. 
ಪ್ರತಿಯೊಂದು ಗೆಲುವಿನಲ್ಲೂ ತಂದೆ, ತಾಯಿ, ಶಿಕ್ಷಕರಿರುತ್ತಾರೆ. ಎಲ್ಲರನ್ನೂ ಗೌರವಿಸಿ. ನಿಮ್ಮ ಪ್ರತಿ ಗೆಲುವಿನಲ್ಲೂ ಅವರ ಪಾಲಿದೆ. ನಿಮ್ಮ ಏಳ್ಗೆಗೆ ನೀವು ಎಷ್ಟು ಕಷ್ಟ ಪಡುತ್ತಿರೋ, ಅದ್ಕಕಿಂತ ಜಾಸ್ತಿ ಅವರು ಅನುಭವಿಸಿರುತ್ತಾರೆ. ನಿಮ್ಮೆದುರು ಹೇಳುವುದಿಲ್ಲ,  ಅಷ್ಟೇ. ನಿಮ್ಮಿಂದ ನಮ್ಮ ಸಮಾಜ ಬದಲಾಗಲಿ ಎಂದು ನಾನು ಬಯಸುತ್ತೇನೆ. ನೀವೂ ಪ್ರಯತ್ನಿಸಿ. 
ಉಜ್ವಲ ಭವಿಷ್ಯ ನಿಮ್ಮದಾಗಲಿ. ನಗುತ್ತ ಬಾಳಿ. ನಿಮ್ಮಿಂದ ಆದಷ್ಟು ಸಹಾಯ ಮಾಡಿ. ಧನ್ಯವಾದಗಳು... "

ವೇದಿಕೆಯಿಂದ ಕೆಳಗಿಳಿದು ಆ ವೃದ್ಧ ಶ್ಯಾಮಸುಂದರರ ಕೈ ಹಿಡಿದು ಹೊರನಡೆದರು. ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲ ನಿಂತು ನೋಡುತ್ತಿದ್ದರು. 
ಮೌನ !
ಸಂಪೂರ್ಣ ಮೌನ !!
ಒಂದು ಅರ್ಥಪೂರ್ಣ ಮೌನ ಎಲ್ಲೆಡೆ ಆವರಿಸಿತ್ತು... 
ಕಥೆಯನ್ನು ಕೇಳಿ ಕಣ್ಣೀರಿಟ್ಟ ಮಕ್ಕಳ ಮುಗ್ಧ ಕಂಗಳಲ್ಲಿ ಒಂದು ನಿರ್ಧಾರದ ಬೆಳಕಿತ್ತು. ಪ್ರತಿಜ್ಞೆ ಜೀವನದ ನೀತಿಪಾಠವಾಗಿತ್ತು. 

(ಉತ್ಥಾನ - ಮಾರ್ಚ್ 2018ರಲ್ಲಿ 'ಯುವಪ್ರತಿಭೆ' ಎಂದು ಗುರುತಿಸಲ್ಪಟ್ಟು  ಪ್ರಕಟವಾಗಿದ್ದು )

No comments:

Post a Comment

ಕರಗುವೆ...