Tuesday, November 10, 2020

ಬಂದುಬಿಡು ನೀನೊಮ್ಮೆ...

ಹಠವ ಹೊತ್ತವಳು ನಾನು.. 
ತಾಳ್ಮೆಯ ಪ್ರತಿರೂಪ ನೀನು...
ಮಾತಿಗೊಮ್ಮೆ ಮುನಿವವಳು ನಾನು.. 
ಮುನಿಸ ಕರಗಿಸಿ ನಗಿಸುವವ ನೀನು.. 

ಕನಸ ಕಣ್ತುಂಬಿಕೊಂಡವಳು ನಾನು.. 
ಜೋಗುಳದೊಡನೆ ಕನಸಲೋಕಕೆ 
ಕರೆದೊಯ್ಯುವ ಜೊತೆಗಾರ ನೀನು..
ಎಲ್ಲಿಯ ಬಂಧವಿದು... 

ನಿನ್ನೆದೆ ಗೂಡಲ್ಲಿ ಮಗುವಾಗುವಾಸೆ... 
ತಲೆದಿಂಬಾಗುವೆ.. ನಿನ್ನ ನಗುವಾಗಿರುವೆ.. 
ಲೆಕ್ಕವಿರದಷ್ಟಿದೆ ನನ್ನೊಳಗೆ ಬಯಕೆ.. 
ಕರೆದೊಯ್ಯುವೆಯಾ ನನ್ನಾ ಎನ್ನಲಂಜಿಕೆ.. 

ಹಾಡು ಬಾ ಇಂಪಾಗಿ ಎಂದಿದ್ದೆ.. 
ನನ್ನೊಳಗಿನ ಹಾಡಾದೆ.. 
ಕೊನೆಯವರೆಗೂ ನಿನ್ನ ಪದಗಳಿಗೆ 
ನಾ ಪಲ್ಲವಿಯಾಗುವಾಸೆ... 

ಮಗು,ಮಾತೆ,ಮಡದಿ, ಸಖಿ.. 
ನಾನಾರಾಗಲಿ ನಿನಗೆ.... 
ಉಸಿರಾಗು ಎನ್ನುವೆಯಲ್ಲ ನಗುತ್ತಾ... 

ನಿನ್ನಿಷ್ಟದ ಹೂ ಮುಡಿಸಿ, 
ಹಣೆಗೊಂದು ಚುಕ್ಕೆಯಿಟ್ಟು, 
ಮೇಲೊಂದು ಮುತ್ತನಿಡು... 
ಬಂದುಬಿಡು ನೀನೊಮ್ಮೆ... 

ಬಾ ಚಿಟ್ಟೆಯೇ, ಮೊಗ್ಗರಳುತಿದೆ... 
ಬಿಳಿ ಮಲ್ಲಿಗೆ ಬಾಡುವ ಮುನ್ನ 
ಘಮಿಸು, ಮುದ್ದಿಸು, ಆಲಂಗಿಸು, ಸಂತೈಸು... 
ಬಂದುಬಿಡು ನೀನೊಮ್ಮೆ... 

No comments:

Post a Comment

ಕರಗುವೆ...