Tuesday, January 18, 2022

ಮೈಲಿಗೆ


ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು, "ತಿಳಿ ಬಣ್ಣದ ಬಟ್ಟಿಲಿ ರಕ್ತ ಎದ್ದು ಕಾಣ್ತೈತೆ.. ಬುರ್ಖಾ ಹಾಕಿ ಉಸಿರು ಕಟ್ಟಿರು ಪರವಾನಿಲ್ಲ.. ನಮ್ಮ ರಕ್ತ ಕಾಣಕಿಲ್ಲ.. ಅಂದ್ಲು ನಮ್ಮ ಅಮ್ಮಿ.. ಕಂಡ್ರೆ ಏನು ತಪ್ಪು.. ಎಲ್ಲರ ರಕ್ತನೂ ಕೆಂಪೇ ಆಲ್ವಾ ಅಂತಾ ಕೇಳ್ದೆ.. ಅದ್ಕೆ ದೊಡ್ದ್ ಹುಡ್ಗಿ ಥರ ಮಾತಾಡ್ಬೇಡ ಅಂದ್ಲು.." ಎನ್ನುತ್ತಾ ಮುಖ ಬಾಡಿಸಿದಳು!!
ಇಂತಹ ಮೌಢ್ಯಗಳು ಜಾತಿ - ಧರ್ಮವನ್ನೂ ಮೀರಿ ನಿಂತಿವೆಯಲ್ಲ.. 
ದೇಹಕ್ಕೆ ಧರ್ಮವಿಲ್ಲ... ಪ್ರಾಣಿಯಾದರೂ ಸರಿಯೇ.. ಹೆಣ್ಣು ರಕ್ತ ಹರಿಸಲೇಬೇಕಲ್ಲ..

"ಹೆಣ್ಣಾಗೋದು ಸುಲಭ ಅಲ್ವೇ ಹುಡುಗಿ.." ಎಂದಿದ್ದರು ಒಬ್ಬಾಕೆ!
"ಅದೊಂದು ಬದಲಾವಣೆಗಳ ಆಗರ!! ಆ ಬದಲಾವಣೆಗಳೊಂದಿಗೆ ಹೋರಾಡುತ್ತ, ಹೊಂದಿಕೊಳ್ಳುತ್ತಾ, ದಿನ ಕಳೆಯುವುದಂತೂ ಅನುಭವಿಸಿದವರಿಗೆ ಗೊತ್ತು.. ಹೊಟ್ಟೆಯೊಳಗಿಂದ ಹಿಂಡಿದಂತೆ ಭಾವ, ನೋವು! ಹರಿವ ರಕ್ತ.. ಬಟ್ಟೆ ಹಿಂಡಿದಂತಲ್ಲ, ಕಬ್ಬು ಹಿಂಡಿ, ರಸ ತೆಗೆದಂತೆ... ಈ ಸಮಯವನ್ನು ಅರ್ಥ ಮಾಡಿಕೊಳ್ಳಿ ಎಂದು ನನ್ನ ಮಗನಿಗೆ ಹೇಳಿದೆ, ಅವ ನನಗೆಲ್ಲಾ ಗೊತ್ತಮ್ಮಾ.. ನೀನು ರೆಸ್ಟ್ ಮಾಡು ಎಂದ!! ಮಗಳಿಲ್ಲ ಎಂಬ ಕೊರಗು ಹೋಯ್ತು.." ಮಗನಿಗೂ ಬಿಡಿಸಿ ಹೇಳಿದ್ದಳಾಕೆ.. ಎಲ್ಲವನ್ನೂ ಅರಿತಿರಲಿ ಎಂದು..

ನನ್ನ ದೇಹಕೆ ರಕ್ತ ನೀಡಿದವಳೆನ್ನ ಅಮ್ಮ..
ಕಣ ಕಣಕೂ ಜೀವ ತುಂಬಿದವಳು..
ಮುಕ್ತವಾಗಿ ಹೇಳುತ್ತೇನೆ, ನಾ ಮೊದಲು ಋತುಮತಿಯಾದಾಗ ಅಮ್ಮನೂ ಆಚೆ ಕುಳಿತಿದ್ದಳು! 
ಅದೆಷ್ಟು ನಾಜೂಕು ಈ ಸಮಯ! ಹಾರಾಡುತ್ತ ಕುಣಿಯುತ್ತಲಿದ್ದವಳು, ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಲಿದ್ದೆ..

ಆದರೂ ನನ್ನ ಭಯ ಇಮ್ಮಡಿಸಿದ್ದು ನನ್ನಮ್ಮನ ಮುಟ್ಟು ನಿಲ್ಲುವ ಸಮಯದಲ್ಲಿ.. ವರ್ಷಗಟ್ಟಲೆ ಅನುಭವಿಸಿದ ಯಾತನೆಯ ಕಂಡು!! ಮಧ್ಯರಾತ್ರಿಯೂ ಅಪ್ಪ, ಅಮ್ಮನನ್ನು ಡಾಕ್ಟರ ಬಳಿ ಕರೆದೊಯುತ್ತಿದ್ದರು. ಕೊನೆಗೂ ಅವಳ ನೋವು ನಿಂತಿದ್ದು ಒಂದು ಶಸ್ತ್ರ ಚಿಕಿತ್ಸೆಯಿಂದ..
ಯಾರಾದರೂ ಹುಟ್ಟಿದ ಜಾಗವನ್ನು ನೋಡಿದ್ದೀಯಾ ಎಂದು ಕೇಳಿದರೆ ಹೌದೆನ್ನುತ್ತಾರೆ, ಜಾಗದ ಹೆಸರು ಹೇಳುತ್ತಾರೆ. ನಾನೂ ನೋಡಿದ್ದೇನೆ ನನ್ನಮ್ಮನ ಗರ್ಭಕೋಶವನ್ನು! ಒಂದು ಮುಷ್ಟಿಯ ಜಾಗದಲ್ಲಿ ನನ್ನ ಬೆಳೆಸಿದ್ದಾಳವಳು!
ಆ ನೋವನ್ನು ಪ್ರತಿ ಹೆಣ್ಣು ಅನುಭವಿಸುತ್ತಾಳೆ.ನಾ ನೋಡಿದಂತೆ ಕೆಲವರು ಅಸಹ್ಯಪಟ್ಟುಕೊಳ್ಳುತ್ತಾರೆ, ಇದರ ಬಗ್ಗೆ ಮಾತನಾಡಲು ಮುಜುಗರ ಎನ್ನುತ್ತಾರೆ!!
ಈ ಮೂರು ದಿನಗಳಾದರೂ ವಿಶ್ರಾಂತಿ ಸಿಗಲಿ, ದೇಹ ಆದಷ್ಟು ಶುಚಿಯಾಗಿರಲಿ ಎಂಬ ಕಾರಣಕ್ಕೆ ಹೊರಗೆ ಕೂರಿಸಿದರೆ, 'ಮೈಲಿಗೆ' ಎಂದು ಹೆಸರಿಸುತ್ತಾರೆ.

ದೇಹ ನನ್ನದು...
ರಕ್ತ ನನ್ನದು...
ಮಾಂಸ ನನ್ನದು...
ಕ್ಷಣ ಕ್ಷಣಕ್ಕೂ ಬದಲಾಗುವ ಭಾವ ನನ್ನದು...
ಅನುಭವಿಸುವ ನೋವು ನನ್ನದು...
ಮೈಲಿಗೆ ಮಾತ್ರ ಆಡುವವರ ಬಾಯಿಯದು!!
ದಶಕಗಳಿಂದ ಇಂತಹುದನ್ನು ಪಾಲಿಸಿಕೊಂಡು ಬಂದಿದ್ದ ನನ್ನಜ್ಜಿಗೆ ಇವಿಷ್ಟನ್ನು ಹೇಳಿದ ನಂತರ ಒಂದೇ ಕ್ಷಣಕ್ಕೆ "ನೀ ಇನ್ನೂ ಆಚೆ ಕೂರುವುದು ಬೇಡ.. ಆರಾಮವಾಗಿ ಒಳಗೇ ಇರು" ಎಂದಳಲ್ಲ, ಆ ಗಟ್ಟಿತನ ಇನ್ನೂ ಹಲವರಿಗೆ ಬರಬೇಕಿದೆ!!

-ಪಲ್ಲವಿ ಹೆಗಡೆ 



No comments:

Post a Comment

ಕರಗುವೆ...