ನಂಬಿ ಬಂದಿದ್ದೆ ನಾನು
ನನ್ನ ಹಸಿವ ನೀಗಿಸುವ ಮಾನವ ಎಂದು
ಹೊಟ್ಟೆಯೊಳಗಿದ್ದ ಪುಟ್ಟ ಕಂದ
ಅಮ್ಮಾ ಹಸಿವು ಎನ್ನುತ್ತಿದ್ದ
ಹಸಿವು ಎಲ್ಲರಿಗೂ ಒಂದೇ ಅಲ್ಲವೇ
ಊರ ಬಿಟ್ಟು ಊರ ಅಲೆಯುತ್ತಿದ್ದೀರಿ
ನೀವು ಮಕ್ಕಳ ಕಟ್ಟಿಕೊಂಡು ಊಟಕ್ಕಾಗಿ..
ನಾ ಮಾಡಿದ್ದೂ ಅದೇ ಅಲ್ಲವೇ?
ನಿಮ್ಮ ಕೈಲಿದ್ದ ಹಣ್ಣೊಂದೇ ಕಂಡಿದ್ದು ನನಗೆ
ಊಟ ಕೊಟ್ಟು,ಜೀವ ಬಲಿ ಪಡೆಯುವ ಹುನ್ನಾರವಲ್ಲ..
ನನ್ನ ದೇಹದಷ್ಟು ವಿಶಾಲ ನಿಮ್ಮ ಮನಸು
ಎಂದುಕೊಂಡ ನನಗೆ ಹಣ್ಣೊಳಗಿನ ವಿಷ ಕಾಣಲಿಲ್ಲ..
ನನ್ನ ಮುಖವಿರುವ ಮೂರ್ತಿಗೆ ಪೂಜಿಸುವೆ ನೀನು
ಹಬ್ಬದಲ್ಲಿ ಅದೇ ಮುಖವ ಮುಳುಗಿಸಿ ಪಟಾಕಿ ಸಿಡಿಸುವೆ
ಅದೇ ಮುಖ ಹೊತ್ತ ಜೀವ ನಾನು
ಮತ್ತದೇ ಪಟಾಕಿಯ ನನ್ನ ಹೊಟ್ಟೆಗಿಳಿಸಿ, ನನ್ನನ್ನೂ ಮುಳುಗಿಸಿದೆ
ನೋವ ಸಹಿಸುವ ಶಕ್ತಿ ಇರದಿದ್ದರೂ
ನನ್ನೊಳಗಿನ ಜೀವವ ನೋಡುವ ಆಸೆಯಿತ್ತೆನಗೆ..
ಜಲಪ್ರಸವಕೆಂದು ನೀರಿಗಿಳಿದ ನನಗೆಲ್ಲಿ ಗೊತ್ತಿತ್ತು
ಜೀವ ಹೊತ್ತ ಜೀವವೂ ಜಲದೊಳಗೇ ಲೀನವಾಗುವುದೆಂದು..?
No comments:
Post a Comment