Saturday, June 13, 2020

ಕಡಿಯಬೇಡಿರಣ್ಣಾ.. ಮರವಿದು ತಂದೆ-ತಾಯಿಯಣ್ಣಾ..

ಕಾಡನ್ನು ವನದೇವಿ ಎಂದೂ, ನೆಲವನ್ನು ಭೂಮಿತಾಯಿ ಎಂದೂ, ನದಿಯನ್ನು ಗಂಗಾಮಾತೆ ಎಂದೂ, ಹಸುವನ್ನು  ಗೋಮಾತೆ ಎಂದೂ  ಕರೆದು ಪೂಜಿಸುವ ದೇಶ ನಮ್ಮದು. ವರುಷಕ್ಕೊಮ್ಮೆ ಮಾತ್ರ   ಪರಿಸರ ದಿನ, ವನ್ಯಜೀವಿ ಸಂರಕ್ಷಣಾ ದಿನ, ಭೂಮಿ ಹುಣ್ಣಿಮೆ, ಗಂಗಾಷ್ಟಮಿ, ದೀಪಾವಳಿಗಳನ್ನು  ಆಚರಿಸುವವರು(ವಾಟ್ಸಪ್ಪ್, ಫೇಸ್ಬುಕ್ ಗಳಲ್ಲಿ !!) ನಾವು.  ನಂತರದ ದಿನಗಳಲ್ಲಿ  ಮರಗಳು ಕೊಡಲಿ ಏಟಿಗೆ ಉರುಳಿ ಬೀಳುತ್ತವೆ. ನೆಲವನ್ನು ಅಗೆದು, ಬೆಟ್ಟಗಳನ್ನು ಕಡಿದ ಹಾಗೆ ಭೂಮಿತಾಯಿ ಘಾಸಿಗೊಳ್ಳುತ್ತಾಳೆ. ಪೂಜನೀಯವಾದ ನದಿಗಳು ತ್ಯಾಜ್ಯಗಳಿಂದ ಅಪವಿತ್ರವಾಗುತ್ತವೆ. ಹಸುಗಳು ಕಸಾಯಿಖಾನೆ ಸೇರುತ್ತವೆ.  
      ಹಬ್ಬಗಳ, ಅಥವಾ ಈ ರೀತಿಯ ದಿನಗಳ ಆಚರಣೆಗಳ ಅರ್ಥ ಇಷ್ಟೇನಾ?  ಖಂಡಿತ ಇಲ್ಲ. ಆ ಒಂದು ದಿನ, ವರ್ಷವಿಡೀ ದಾರಿದೀಪವಾಗಬೇಕು. ಹಾಗೆ ನಾವು ಆಚರಿಸುತ್ತಿದ್ದೇವೆಯೇ ಎಂದು ನನ್ನ ಪ್ರಶ್ನೆ..ಉತ್ತರ ಎಲ್ಲರಿಗೂ ಗೊತ್ತಿದೆ. ನಾವು ನಿಂತಿರುವ ನೆಲ ಕುಸಿದು ಬೀಳಲು ನಾವೇ ಕಾರಣೀಕರ್ತರು ಎಂಬುದು ಒಪ್ಪಿಕೊಳ್ಳಲು ಕಷ್ಟವಾದರೂ, ಸತ್ಯವೇ.. 
     ರವೀಂದ್ರ ಭಟ್ ಐನಕೈ ಅವರ  'ಒಂದು ಮರದ ಕತೆ' ನಾಟಕದಲ್ಲಿ ಮರವೊಂದು ಮನುಷ್ಯನನ್ನು ಬೇಡಿಕೊಳ್ಳುತ್ತದೆ. 
"ಕಡಿಯಬೇಡಿರಣ್ಣಾ ಮರವಾ ಕಡಿಯಬೇಡಿರಣ್ಣಾ 
ಹೊಸಕಿ ಹಾಕಬೇಡಿ ಭೂತಾಯಿಯ ಚೆಲುವಾ 
ಕಡಿದು ಚೆಲ್ಲಬೇಡಿ ನಮ್ಮ ತಾಯಿಯ ಒಲವಾ
ಕಡಿಯಬೇಡಿರಣ್ಣಾ ಮರವಿದು ತಂದೆ -ತಾಯಿಯಣ್ಣಾ.."
  ಆದರೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇಡೀ ಕಾಡನ್ನೇ ನಾಶಮಾಡುತ್ತಾನೆ. ಅದೊಂದು ಮರದಲ್ಲಿ ದೇವರಿದೆ ಎಂಬ ನಂಬಿಕೆಯಿಂದ ಕಡಿಯದೇ ಉಳಿಸಿರುತ್ತಾನೆ. 
ಆ ಮರವು ತನ್ನೆಲ್ಲಾ ಬಾಂಧವರನ್ನು ಕಳೆದುಕೊಂಡ ದುಃಖದಲ್ಲಿ  ಹಾಡುತ್ತದೆ -
"ಕಡಿದು ಕೊಂದರು ಗೆಳೆಯರ ನನ್ನ ಗೆಳೆಯರ.. 
ಗೆಳೆಯರ ಕೊಂದವರ ಚಂಡಿಯು ತಿರುಪಲಿ, 
ಕೊಲೆಯಾದ ನನ್ನ ಗೆಳೆಯಾ.. ಬಂಗಾರದಂಥವಾ... 
ಕತ್ತಿಲಿ ಕಡಿದಿರಿ, ಕೊಡಲೀಲಿ ಬಡಿದಿರಿ.. 
ಎಲ್ಲಾ ಮಂದಿಯು ನೀವಾ.. ಹೋಕೀರಿ ನರಕಕ್ಕ " 
  ಎಷ್ಟು ಸತ್ಯ..  ಆದರೆ ಇಂದು ಪ್ರಕೃತಿ ಮನುಷ್ಯನಲ್ಲಿ ಬೇಡಿಕೊಳ್ಳುವ ಹಂತವನ್ನು ದಾಟಿದೆ. ಉದಾಹರಣೆ ನೀಡಲು ಆಸ್ಟ್ರೇಲಿಯಾದಷ್ಟು ದೂರ ಹೋಗಬೇಕಿಲ್ಲ, ಸುಟ್ಟು ಕರಕಲಾದ ನಮ್ಮ ಬಂಡೀಪುರವೇ ಸಾಕು. ಎಂತಹ ದೊಡ್ಡ ವ್ಯಕ್ತಿಯಾದರೂ ಸರಿಯೇ, ದೆಹಲಿಯ ಮಾಲಿನ್ಯಕ್ಕೆ  ಹೆದರಿ ಎಲ್ಲರೂ ಮನೆಯೊಳಗೆ ಮುದುರಿ ಕುಳಿತಿದ್ದನ್ನು ನೋಡಿದರೆ ಅರ್ಥವಾದೀತು ಪ್ರಕೃತಿಯ ಮುಂದೆ ಯಾವ ದೊಡ್ಡಸ್ತಿಕೆಯೂ ಪ್ರಯೋಜನಕ್ಕೆ ಬಾರದು ಎಂದು.
  ಈ ವರ್ಷದ ಮಳೆಗಾಲದ ಹಾನಿಯಿಂದ ಯಾವ ಕುಟುಂಬವೂ ಇನ್ನೂ  ಚೇತರಿಸಿಕೊಂಡಿಲ್ಲ. ನೆಲವಿನ್ನೂ ಹಸಿಯಾಗಿಯೇ ಇದೆ. 
      ಅದಕ್ಕೆ ಹೇಳಿದ್ದು -ಪ್ರಕೃತಿ ಮಾತೆ ಇನ್ನೆಂದೂ ಬೇಡಿಕೊಳ್ಳಲಾರಳು, ಕೇವಲ ದಂಡಿಸುತ್ತಾಳೆ. ನಾವು ಸಿದ್ಧರಿರಬೇಕು. ಯಾಕೆಂದರೆ ಎಲ್ಲದಕ್ಕೂ ಕಾರಣ ನಾವೇ ತಾನೇ..  
       ಏನೇ ಮಾಡಿದರೂ ಪರಿಸರ ಸಹಿಸಿಕೊಳ್ಳುತ್ತದೆ ಎಂಬ ಹುಚ್ಚು ಭ್ರಮೆಯಲ್ಲಿ ಮನುಷ್ಯ ಕ್ರೂರನಾದ, ವಿಷಜಂತುವಾದ. ಇಂದು ಪ್ರಪಂಚದಲ್ಲಿ ಮನುಷ್ಯ ಎಂಬ ಪ್ರಾಣಿಯನ್ನು ಬಿಟ್ಟು ಉಳಿದೆಲ್ಲ ಜೀವಿಗಳು ಅಳಿವಿನಂಚಿನಲ್ಲಿವೆ ಎಂದರೆ ತಪ್ಪಾಗಲಾರದು. 
     ಸ್ವಾರ್ಥದಿಂದ ಅಂಧನಾದ ಮಾನವನಿಗೆ ತನ್ನ ವಿನಾಶದ ಹಾದಿಯನ್ನು ತಾನೇ ರಚಿಸುತ್ತಿದ್ದೇನೆ ಎಂಬುದೂ ಕಾಣದಾಯಿತೇ? 
      ಮಕ್ಕಳು ತಪ್ಪು ಮಾಡಿದಾಗ, ತಾಯಿ ಒಂದು ಪೆಟ್ಟು ಕೊಡುತ್ತಾಳೆ -ಮತ್ತೆ  ಆ ತಪ್ಪು ಮಾಡದಿರಲಿ ಎಂದು. ಈಗ ಆಗಿರುವುದೂ ಅಷ್ಟೇ. ಇನ್ನೂ ಅನಾಹುತವಾಗುವ ಮುನ್ನ ಎಚ್ಚೆತ್ತುಕೊಳ್ಳದಿದ್ದಲ್ಲಿ, ಭೀಕರ ಪರಿಣಾಮವನ್ನು ಎದುರಿಸಬೇಕಾದೀತು.
      ಹಾಂ! ಪ್ರಪಂಚವಿಡೀ ಒಂದು ದಿಕ್ಕಿನಲ್ಲಿ ಸಾಗುತ್ತಿದ್ದರೆ, ಮಹಾನಗರಿಗಳ ದಿಕ್ಕೇ ಇನ್ನೊಂದು ಕಡೆ..! ವಿದ್ಯಾವಂತರೆನ್ನಬೇಕೋ, ಬುದ್ಧಿವಂತರೆನ್ನಬೇಕೋ, ಹಣವಂತರೆನ್ನಬೇಕೋ...ತಿಳಿಯದಾಗಿದೆ.  
    ಸುಂದರವಾಗಿ ಮಣ್ಣಿನಲ್ಲಿ ಬೆಳೆದು,  ಆಕಾಶದತ್ತ ಮುಖಮಾಡಿ ನಗು ಬೀರಬೇಕಿದ್ದ ಗಿಡಗಳನ್ನು ತಂದು, ಬೇರುಗಳನ್ನು ಕತ್ತರಿಸಿ , ಚಿಗುರನ್ನು ಚಿವುಟಿ, ಬಣ್ಣ-ಬಣ್ಣದ  ಕುಂಡದಲ್ಲಿ ನೆಟ್ಟು (ಇಟ್ಟು),  ಸೆಲ್ಫಿ ತೆಗೆದು, ಗೋ ಗ್ರೀನ್ಎಂದು ಬರೆದು  ಜಾಲತಾಣಗಲ್ಲಿ ಹಾಕುವವರನ್ನು ನೋಡಿದರೆ ನಗಬೇಕೋ ಅಳಬೇಕೊ ನಾನರಿಯೆ.. !! 
   ಪಾಪ ಅವರಾದರೂ ಏನು ಮಾಡಿಯಾರು?  ಮನೆಯೆದುರು ಅಂಗಳವಿಲ್ಲ, ತಲೆಯೆತ್ತಿ ನೋಡಲು ಆಕಾಶವಿಲ್ಲ ( ಎಲ್ಲವೂ ಮುಗಿಲೆತ್ತರದ, ದೈತ್ಯಾಕಾರದ ಕಟ್ಟಡಗಳೇ,  ಅಲ್ಲೊಂದು ಮಹಡಿಯಲ್ಲಿ ವಾಸ..!), ಇನ್ನು ಗಿಡಗಳಿಗೆಲ್ಲಿಂದ ಜಾಗ ತರಬೇಕು?   
      ಕೆಲವರು ಹೀಗೆ ಬೆಳೆಸುವುದು ಮನಸ್ಸಿಗೆ ನೆಮ್ಮದಿ ಕೊಡುತ್ತದೆ ಎನ್ನುತ್ತಾರೆ. ಕೆಲವರು ಅನಿವಾರ್ಯ ಎಂದರೆ ಬಹಳಷ್ಟು ಜನರಿಗೆ ಆಡಂಬರದ ಸಂಕೇತ! ವಿಷಾದವೇನೆಂದರೆ  ಇದು ( ಬೇರುಗಳನ್ನು ಕಡಿದ ಗಿಡಗಳನ್ನು ಮಾರುವುದು ) ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. 
       ಏನಾದರಾಗಲಿ, ಒಟ್ಟಿನಲ್ಲಿ ಹಸಿರಿದೆಯಲ್ಲಾ ಎಂದು ನಿಟ್ಟುಸಿರಿಡಬೇಕಷ್ಟೆ !
            ದೇಶ ಎಷ್ಟೇ ಪ್ರಗತಿ ಸಾಧಿಸಲಿ, ತಂತ್ರಜ್ಞಾನ ಎಷ್ಟೇ ಮುಂದುವರೆಯಲಿ, ಉಸಿರಾಡಲು ಆಮ್ಲಜನಕವೇ ಇರದಿದ್ದಲ್ಲಿ ಏನು ಮಾಡಲು ಸಾಧ್ಯ?
    ಇನ್ನಾದರೂ ಎಚ್ಚೆತ್ತುಕೊಳ್ಳೋಣ. ವಿಷಪೂರಿತ ನಗರಗಳನ್ನು ಕಟ್ಟಿ ಬೆಳೆಸಿದ ನಮಗೆ ಕಾಡನ್ನು ಬೆಳೆಸುವುದು ಕಷ್ಟವೇನಲ್ಲ... 

          ಹಸಿರನ್ನು ಬೆಳೆಸೋಣ, ಹಸನಾಗಿ ಬಾಳೋಣ...

No comments:

Post a Comment

ಹೆಣ್ಣು