Saturday, June 13, 2020

ಬದುಕೇ ದೊಡ್ಡದು

ಎಲ್ಲಿ ಹೋಗಬೇಕು ನಾವು?  
ದಿನಗೂಲಿಯ ನಂಬಿ ಬದುಕುವೆವು.. 
ಗಂಡು-ಹೆಣ್ಣಿನ ಬೇಧವಿರದು ನಮ್ಮಲ್ಲಿ, 
ದುಡಿದರೆ ಮಾತ್ರ ನಮಗೆ ಊಟವು.. 

ಹುಟ್ಟಿದಂದಿನಿಂದ ಜೀವನವೇ ದೊಡ್ಡ ಹೋರಾಟ, 
ತುತ್ತು ಅನ್ನಕ್ಕಾಗಿಯೇ ಪರದಾಟ, 
ಗೂಡ ಬಿಟ್ಟು ಸಾಗಿದ್ದೆವು ಬಲುದೂರ, 
ಈಗೆಲ್ಲಿ ಹೋಗಬೇಕು ನಾವು? 

 ಬಂದಿತೊಂದು ಮಹಾಮಾರಿ.. 
ಕಿತ್ತುಕೊಂಡಿತು ನಮ್ಮ ಕೆಲಸವ, ಚಿಂದಿ ಬಟ್ಟೆಯ..
ತುತ್ತು ಅನ್ನವ, ನಿಂತ ಜಾಗವ.. 
ಎಲ್ಲಿ ಹೋಗಬೇಕು ನಾವು? 

ಕಣ್ಣ ತುಂಬಾ ನೋವಿದೆ, ಹೆಗಲ ಮೇಲೆ ಮಗುವಿದೆ,   
ಮುದಿ ಕಾಲುಗಳು ನಿಧಾನವಾಗಿ ಹೆಜ್ಜೆ ಇಡುತಿವೆ,  
ಸಾಗುವೆವು ನಾವು ಬಂದ ಹಾದಿಯಲ್ಲೇ,   
ಸುಡುವ ಬಿಸಿಲ ಲೆಕ್ಕಿಸದೆ..

ಹುಟ್ಟಿದೂರ ತಲುಪುವವರೆಗೂ, 
ಕುಸಿದು ಬೀಳುವ ವರೆಗೂ, 
ತುತ್ತು ಅನ್ನ ಸಿಗುವವರೆಗೂ, 
ಉಸಿರು ನಿಲ್ಲುವವರೆಗೂ, ಸಾಗುವೆವು ನಾವು.. 

ಕೊರೋನಾ ಬಂತೆಂದು ನಾವೂ ಕೂರೋಣವೇ? 
ಕೂತಲ್ಲೇ ಬರುವುದು ಸಾವು.. 
ಕಾರಣ ಕಾಣದ ಕೊರೊನವಲ್ಲ, 
ಮಗುವಿನ ಅಳು, ಅಮ್ಮನ ದಣಿವು, ಮಡದಿಯ ಹಸಿವು..

ಕಾಣದ ಜಂತುವಿಗೆ ಭಯವಿಲ್ಲ ನಮ್ಮಲ್ಲಿ, 
ಕಾಣುವ ಹೊಟ್ಟೆ ಕಂಗೆಡಿಸಿದೆ.. 
ಸೂರೇ ಇಲ್ಲದ ನಮಗೆ ಸುರಕ್ಷತೆಯೆಲ್ಲಿ? 
ಬದುಕೇ ದೊಡ್ಡದೆನಿಸಿದೆ.. 
      ಹೌದು ! ನೋವಿಗಿಂತ, ಸೂರಿಗಿಂತ, 
ಸಾವಿಗಿಂತ  ಬದುಕು ದೊಡ್ಡದು...
ಬದುಕೇ ದೊಡ್ಡದು.... 

No comments:

Post a Comment

ಹೆಣ್ಣು