ರಕ್ತವೆಂಬ ಕೆಂಪು ಭೀಕರತೆಯ ಹೇಳುತಿರೆ,
ಕೆಂಪಾದ ಗುಲಾಬಿ ನವಿರಾದ ಪ್ರೀತಿಯ ಬಿಂಬಿಸುತಿದೆ
ವರ್ಣ ಭೇದವ ಬಿಟ್ಟು ರಂಗಿನಾಟವ ಆಡಿ,
ನನಗೂ ಬಣ್ಣಗಳೊಡನೆ ಬಣ್ಣವಾಗುವಾಸೆ...
ರಂಗಮಂಚದ ರಂಗನು ಹೇಗೆ ನಾ ಬಣ್ಣಿಸಲಿ,
ಮುಖದ ಮೇಲಿನ ರಂಗು , ಉಡುಗೆ-ತೊಡುಗೆಯ ರಂಗು, ಹಿಂದಿನ ಪರದೆ - ಮುಂದಿನ ಬೆಳಕಿನ ರಂಗು,
ನನಗೂ ಈ ಬಣ್ಣಗಳೊಡನೆ ಬಣ್ಣವಾಗುವಾಸೆ...
ಕಾಣದ ಬಣ್ಣವು ಕಾಡಿದೆಯಾದರೂ
ಕಾಣುವ ಬಣ್ಣವು ಕಾಯುತಿದೆ
ಬಣ್ಣದ ಲೋಕದಿ ಹೆಜ್ಜೆಯನಿಟ್ಟು,
ನನಗೂ ಬಣ್ಣಗಳೊಡನೆ ಬಣ್ಣವಾಗುವಾಸೆ...
ಕಡಲ ತೀರದಿ ಬಿಳಿಯ ಅಲೆಗಳು ಬಂದಪ್ಪಳಿಸುತಿರೆ,
ಮನದಲ್ಲಿ ಹೆಪ್ಪುಗಟ್ಟಿದ ಕರಿಮೋಡಗಳು ಕರಗುತಿವೆ
ಕಪ್ಪಾದ ನೆರಳು ನನ್ನ ಹೆದರಿಸಿದರೂ,
ಬೆಳಕೆಂಬ ಬಣ್ಣಗಳೊಡನೆ ಬಣ್ಣವಾಗುವಾಸೆ...
ಸಂಜೆಯ ಸೂರ್ಯ ನಾಳೆಯ ಕನಸಿಗೆ ರಂಗೆರಚುವಾ
ಕತ್ತಲ ರಾತ್ರಿಗೆ ಬಿಳಿಯ ಚಂದಿರ ತಂಪೆರೆಯುವಾ
ಬೆತ್ತಲೆ ಬಯಲಿಗೆ ಹಸಿರ ಕಾನನ ಹೊದಿಕೆಯಾಗಿರೆ,
ನನಗೂ ಬಣ್ಣಗಳೊಡನೆ ಬಣ್ಣವಾಗುವಾಸೆ...
No comments:
Post a Comment